ಮೂಡಲಗಿ: ‘ಕಲೆಗಳಿಗೆ ಜೀವ ತುಂಬಿ ನಾಡಿನ ಸಾಂಸ್ಕøತಿಕ ಪರಂಪರೆಯನ್ನು ಮುನ್ನಡೆಸುವ ಕಲಾವಿದರಿಗೆ ಸರ್ವಕಾಲಿಕ ಮನ್ನಣೆ ದೊರೆಯಬೇಕು’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಸಮೀಪದ ಇಟನಾಳ ಗ್ರಾಮದ ಶಿವಶರಣ ಶಾಬುಜಿ ಐಹೋಳೆ ಮತ್ತು ಮಾತೋಶ್ರಿ ಅವಬಾಯಿ ಐಹೊಳೆ ಅವರ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಶಿವಭಜನೆ ಮತ್ತು ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲಾವಿದರು ಕಷ್ಟ, ನೋವು ಉಂಡು ಬಡವರಾಗಿದ್ದರೂ ಸಹ ತಮ್ಮ ಕಲಾವಂತಿಕೆಯಿಂದ ಅವರು ಶ್ರೀಮಂತರೆನಿಸುತ್ತಾರೆ ಎಂದರು.
ಭಜನೆಯು ದೇವರನ್ನು ಸ್ಮರಿಸುವ ಸರಳ ಮಾರ್ಗವಾಗಿದ್ದು, ಶಿವಶರಣರ ವಚನ, ಅನುಭಾವ ಸಾಹಿತ್ಯವನ್ನು ರಾಗ ಸಂಯೋಜನೆಯ ಮೂಲಕ ಜನರಿಗೆ ಸುಲಭವಾಗಿ ಅರಿಯುವ ರೀತಿಯಲ್ಲಿ ತಳುಪಿಸುವ ಸ್ತುತ್ಯ ಕಾರ್ಯ ಮಾಡುತ್ತಿದ್ದಾರೆ ಎಂದರು.
ಇಟನಾಳದ ಶರಣ ಶಾಬುಜಿ ಐಹೊಳಿ ಭಜನೆ ಕಲೆಯ ಮೂಲಕ ಕಲಾ ಪರಂಪರೆಯನ್ನು ಬೆಳೆಸಿದ್ದಾರೆ. ಶಾಬುಜಿ ಐಹೊಳೆ ಅವರ ತ್ಯಾಗ, ಕಷ್ಟ ಸಂಹಿಷ್ಣುತೆಯ ಪ್ರತಿಫಲವಾಗಿ ಸದಾಶಿವ ಐಹೊಳೆ ಅವರಂತ ಖ್ಯಾತ ಕಲಾವಿದ ಕಲಾ ಪ್ರಪಂಚಕ್ಕೆ ದೊರಕಿದ್ದಾರೆ ಎಂದರು.
ಸಾನ್ನಿಧ್ಯವಹಿಸಿದ್ದ ಇಟನಾಳದದ ಮೈಲಾರಲಿಂಗೇಶ್ವರ ದೇವಸ್ಥಾನದ ಸಿದ್ಧೇಶ್ವರ ಆಶ್ರಮ ಸಿದ್ಧೇಶ್ವರ ಸ್ವಾಮೀಗಳು ಮಾತನಾಡಿ ಗುರು, ಪರಮಾತ್ಮನನ್ನು ನಿತ್ಯ ಸ್ಮರಣೆ ಮಾಡುವುದರ ಮೂಲಕ ಜೀವನದಲ್ಲಿ ಆನಂದ ದೊರೆಯುತ್ತದೆ ಮತ್ತು ಅದು ಜೀವನ ಮುಕ್ತಿಯ ಮಾರ್ಗವಾಗಿದೆ ಎಂದರು.
ಎಸ್.ಕೆ. ಕೊಪ್ಪದ ಹಿರಿಯ ಕಲಾವಿದ ರಾಮನಗೌಡ ವಜ್ರಮಟ್ಟಿ ಅಧ್ಯಕ್ಷತೆವಹಿಸಿದ್ದರು.
ಧಾರವಾಡ ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬೆಳಗಲಿಯ ಯಮನಪ್ಪ ಆಲಗೂರ, ರಾಯಬಾಗದ ಶಿವಾನಂದ ಹುಲಗಬಾಳಿ, ಗಂಗಾಧರ ಸರಿಕರ, ಮಹಾದೇವಪ್ಪ ಐಹೊಳೆ, ಪರಮೇಶ್ವರ ತೇಲಿ, ರಂಗಪ್ಪ ಐಹೊಳೆ, ರಾಮಕೃಷ್ಣ ಐಹೊಳೆ ಭಾಗವಹಿಸಿದ್ದರು.
ಶಾನೂರ ಐಹೊಳೆ ಸ್ವಾಗತಿಸಿದರು, ಡಾ. ಮಹಾದೇವ ಪೋತರಾಜ ನಿರೂಪಿಸಿದರು.
ಭಜನೆ, ಸಂಗೀತ ಸಮ್ಮಿಲನ: ನಾಡಿನ ವಿವಿಧೆಡೆಯಿಂದ 50ಕ್ಕೂ ಅಧಿಕ ಭಜನೆ, ಸಂಗೀತ ಕಲಾವಿದರು ಭಾಗವಹಿಸಿ ವಿವಿಧ ರಾಗಗಳಲ್ಲಿ ಹಾಡಿ ಶ್ರೋತೃಗಳ ಮನತಣಿಸಿದರು.
ಹಿಂದೂಸ್ತಾನಿ ಗಾಯಕ ಸದಾಶಿವ ಐಹೊಳೆ, ಪರಮೇಶ್ವರ ತೇಲಿ, ಶಿವಾನಂದ ಹುಲಗಬಾಳಿ, ಗಂಗಾಧರ ಸರಿಕರ, ನಾಗೇಶ ಐಹೊಳೆ, ವಿಠಲ ಐಹೊಳೆ, ಮಹಾಂತೇಶ ಹೂಗಾರ, ರಾಮ ಖೋತ, ಪಾಂಡು ಬುದ್ನಿ, ಮಹಾಲಿಂಗ ಯಡವನ್ನರ, ಬಸವರಾಜ ಮರಗನ್ನವರ, ವಿಠ್ಠಲ ಕುಂಚನೂರ ಇವರೆಲ್ಲ ಭಜನೆ ಮತ್ತು ಸಂಗೀತ ಅಲಾಪ ಮಾಡಿ ಶ್ರೋತೃಗಳು ತಲೆದೂಗುವಂತೆ ಮಾಡಿದರು.