ಮೂಡಲಗಿ: ‘ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಅವರು ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಬೆಳಗಾವಿಯ ಯುವ ಸಬಲೀಕರಣ ಮತ್ತು ಕೀಡಾ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಮೂಡಲಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲ್ಲೂಕು ಮಟ್ಟದ ಕ್ರೀಡಾಕೂಟದಿಂದ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಬೆಳೆಕಿಗೆ ತರುವಲ್ಲಿ ಸಹಾಯವಾಗುತ್ತದೆ. ಕ್ರೀಡೆಗಳು ಶಿಸ್ತು ಮತ್ತು ಉತ್ಸಾಹವನ್ನು ತುಂಬುವದಲ್ಲದೆ ವ್ಯಕ್ತಿತ್ವ ರೂಪಿಸುತ್ತವೆ ಎಂದರು.
ಅಧ್ಯಕ್ಷತೆವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ ಕ್ರೀಡಾಪಟುಗಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ಪ್ರಾಥಮಿಕ ಹಂತವು ಅಡಿಪಾಯವಿದ್ದಂತೆ. ಕ್ರೀಡಾಕೂಟವು ಮಕ್ಕಳಲ್ಲಿ ಕ್ರೀಡೆ ಬಗ್ಗೆ ಪ್ರೇರಣೆ ನೀಡುತ್ತದೆ ಎಂದರು.
ಅತಿಥಿ ಬಾಲಶೇಖರ ಬಂದಿ ಮಾತನಾಡಿ ಕ್ರೀಡೆಗಳು ಶಾಂತಿ, ಸಾಮರಸ್ಯತೆಯನ್ನು ಬೆಳೆಸುತ್ತವೆ. ಕ್ರೀಡೆಗಳಲ್ಲಿ ಸೋಲು, ಗೆಲುವಿಗಿಂತ ಭಾಗವಹಿಸಿ ಕ್ರೀಡಾ ಪ್ರತಿಭೆಯನ್ನು ಮೆರೆಯುವುದು ಮುಖ್ಯವಾಗಿರುತ್ತದೆ ಎಂದರು.
ಸಂಘಟಕ ಸಿದ್ದಣ್ಣ ದುರದುಂಡಿ ಪ್ರಾಸ್ತಾವಿಕ ಮಾತನಾಡಿ ತಾಲ್ಲೂಕು ಮಟ್ಟದದಲ್ಲಿ ವಿಜೇತರಾಗುವ ಕ್ರೀಡಾಪಟುಗಳು ಜಿಲ್ಲಾ ಮಟ್ಟ ನಂತರ ವಿಭಾಗ ಮಟ್ಟದಲ್ಲಿ ಸ್ಪರ್ಧಿಸಿ ಗೆಲವು ಸಾಧಿಸಿ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಕೇಕ್ ಕತ್ತಿರಿಸುವ ಮೂಲಕ ಹಾಕಿ ಮಾಂತ್ರಿಕ ಧ್ಯಾನ ಚಂದ್ ಅವರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಿದರು.
ಏಷಿಯಿನ್ ಪ್ಯಾರಾ ಟೆಂಕ್ವೋಡೋದಲ್ಲಿ ಕಂಚಿನ ಪದಕ ಪಡೆದ ಮೂಡಲಗಿಯ ಲಕ್ಷ್ಮೀ ರಡರಟ್ಟಿ ಅವರನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪುರಸಭೆ ಅಧ್ಯಕ್ಷ ಖುರ್ಷಾದ ನದಾಫ್, ಉಪಾಧ್ಯಕ್ಷ ಭೀಮವ್ವ ಪೂಜೇರಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ, ತಾಲ್ಲೂಕು ಪಂಚಾಯಿತಿ ಇಒ ಎಫ್.ಎಸ್. ಚಿನ್ನನವರ, ನಿರ್ದೇಶಕರಾದ ಡಾ. ಶಿವು ಹೊಸೂರ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಆನಿ, ದೈಹಿಕ ಪರಿವೀಕ್ಷಕ ಎಸ್.ಬಿ. ಹಳಿಗೌಡರ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಹಣಮಂತ ಗುಡ್ಲಮನಿ, ಲಕ್ಷ್ಮಣ ಅಡಿಹುಡಿ, ಪ್ರಾಚಾರ್ಯರಾದ ಡಾ. ಎಸ್.ಎಲ್. ಚಿತ್ರಗಾರ, ಡಾ. ಎಂ.ಕೆ. ಕಂಕಣವಾಡಿ, ಬಸಲಿಂಗ ನಿಂಗನೂರ, ಕ್ರೀಡಾಕೂಟ ಅನುಷ್ಠಾನಾಧಿಕಾರಿ ರೋಹಿಣಿ ಪಾಟೀಲ, ಎಸ್.ಎಸ್. ಮುತಾನಿ, ನಗಾರಿ ಇದ್ದರು.
ಶಿವಾಪುರದ ಕೆ.ಎಚ್. ಪಾಟೀಲ ನಿರೂಪಿಸಿದರು.