ಮೂಡಲಗಿ: ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ನೀಡಿದ ಸಾಲ ವಸೂಲ ಮಾಡುವಾಗ ಕೆಲ ರೈತ ಸಂಘಟನೆಯವರು ಹಸ್ತ ಕ್ಷೇಪ ಮತ್ತು ಅಡ್ಡಿ ಪಡಿಸುವರ ವಿರುದ್ದ ಕಾನೂನು ಕ್ರಮ ಕೈಗೋಳ್ಳಬೇಕೆಂದು ಆಗ್ರಹಿಸಿ ಮೂಡಲಗಿ ತಾಲೂಕಾ ಸಹಕಾರಿ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಮೂಡಲಗಿ ತಹಶೀಲ್ದಾರ ಶ್ರೀಶೈಲ್ ಗುಡಮೆ ಅವರ ಮೂಖಾಂತರ ಸಹಕಾರ, ಕಂದಾಯ ಸಚಿವರು. ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮೂಡಲಗಿ ಪಟ್ಟಣ ಹಾಗೂ ತಾಲ್ಲೂಕಿನ ಸಹಕಾರಿ ಸಂಘಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸಿಬ್ಬಂದಿಯವರು ಸಾವಿರಾರು ಸಂಖ್ಯೆಯಲ್ಲಿದ್ದ ಸಹಕಾರಿಗಳು ಮೂಡಲಗಿ ಕಲ್ಮೇಶ್ವರ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ತಹಶೀಲ್ದಾರ್ ಕಚೇರಿಗೆ ಹೋಗಿ ಕಚೇರಿಯ ಆವರಣದಲ್ಲಿ ಜಮಾಯಿಸಿ ನಮ್ಮ ಸಹಕಾರ ಕ್ಷೇತ್ರವು 120 ವರ್ಷಗಳ ಇತಿಹಾಸವನ್ನು ಹೊಂದಿದೆ, ದೇಶದ ಆರ್ಥಿಕತೆಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದು ಸಹಕಾರ ಕ್ಷೇತ್ರ, ಮೂಡಲಗಿ ನಗರದಲ್ಲಿ ಮತ್ತು ಮೂಡಲಗಿ ತಾಲೂಕಿನಲ್ಲಿ ಅನೇಕ ರೀತಿಯ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಸಮಾಜದ ಎಲ್ಲ ವರ್ಗದ ಜನರಿಗೆ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸಿ ಸಾಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕ್ರೆಡಿಟ್ ಸೊಸಾಯಿಟಿಗಳು ಯಾವುದೇ ಕಾರಣಕ್ಕೂ ರೈತರಿಗೆ ಕೃಷಿ ಆಧಾರಿತ ಸಾಲಗಳನ್ನು ನೀಡುವುದಿಲ್ಲ. ಸಾಲ ಪಡೆಯುವ ಯಾವುದೇ ಸಾಲಗಾರ ತನ್ನ ಯಾವುದೇ ಆಸ್ತಿಯನ್ನು ಸಾಲದ ಬದ್ರತೆಗೆ ಪೂರಕವಾಗಿ ಸಹಕಾರ ಸಂಘದ ಹೆಸರಿನಲ್ಲಿ ನೊಂದಣಿ ಮಾಡಿ ಕೊಡುವರು, ಸಾಲ ಬದ್ರತೆ ಪಡೆಯುವುದು ಅನಿವಾರ್ಯ. ಸಹಕಾರ ಸಂಘಗಳು ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರಿಂದ ಹಾಗೂ ಇತರ ವರ್ಗದವರಿಂದ ಠೇವು ಸಂಗ್ರಹಿಸಿ ಸಂಸ್ಥೆಯನ್ನು ನಡೆಸುತ್ತಿವೆ. ಸಂಗ್ರಹಿಸಿದ ಠೇವಣಿಯನ್ನು ಸಂಘದ ಸದಸ್ಯರಿಗೆ ಸಾಲ ರೂಪದಲ್ಲಿ ನೀಡಲಾಗಿರುತ್ತದೆ. ಸಾಲ ಪಡೆದ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿಸುವಂತೆ ಕೇಳಿಕೊಂಡಿರುತ್ತೇವೆ. ಸಾಲ ಮರುಪಾವತಿಸಲು ಸಾಕಷ್ಟು ಕಾಲಾವಕಾಶ ನೀಡಿದರು ಕೂಡಾ ಕೆಲವು ಸಾಲಗಾರರು ಮುದ್ದತ್ತು ಮೀರಿದರೂ ಸರಿಯಾಗಿ ಮರುಪಾವತಿಸುತ್ತಿಲ್ಲ. ಇಂತಹ ಕಟಬಾಕಿ ಸಾಲಗಾರರ ವಿರುದ್ಧ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ದಾವೆ ದಾಖಲಿಸಿ ಸಾಲ ವಸೂಲಿ ಮಾಡುವುದು ಅನಿವಾರ್ಯ, ಸಾಲ ವಸೂಲ ಮಾಡುವಾಗ ಸಹಕಾರ ಇಲಾಖೆಯ ಅನುಮತಿ ಪಡೆದುಕೊಂಡು ಹಾಗೂ ಕಾನೂನಿನ ಪ್ರಕಾರ ಸಾಲ ವಸೂಲಿ ಮಾಡುವಾಗ ರೈತ ಸಂಘಟನೆಗಳು ತೊಂದರೆ ಕೊಡುತ್ತಿವೆ. ಇಂತಹ ಸಂಘಟನೆಗಳಿಂದ ಸಹಕಾರ ಸಂಘಗಳಿಗೆ ಹಾನಿ ಉಂಟಾದರೆ ಯಾರು ಹೊಣೆ, ಸಾಲ ವಸೂಲಿಗೆ ತೊಂದರೆ ಕೊಡುವ ಸಂಘಟನೆಗಳು ಸಂಸ್ಥೆಯಲ್ಲಿ ಇರುವ ರೈತಾಪಿ ವರ್ಗದ ಠೇವುಗಳ ಕುರಿತು ವಿಚಾರ ಮಾಡುವಂತಾಗಬೇಕು. ದೇಶದ ಯಾವುದೇ ಬ್ಯಾಂಕುಗಳಾಗಲಿ, ಸರಕಾರವಾಗಲಿ, ನಮ್ಮ ಸಹಕಾರ ಸಂಘಗಳು ವಿತರಿಸುವಷ್ಟು ಸಾಲ ಸೌಲಭ್ಯಗಳನ್ನು ತ್ವರೀತಗತಿಯಲ್ಲಿ ಮತ್ತು ಅಧಿಕ ಮೊತ್ತದ ಸಾಲವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‍ಗಳು ಕೊಡುವುದು ವಿರಳ. ಪರಿಸ್ಥಿತಿ ಹೀಗಿರುವಾಗ ರೈತ ಸಂಘಗಳ ವಿರೋಧದ ಕಾರಣ ಸಾಲ ವಸೂಲಿಯಾಗದಿದ್ದರೆ ಸಹಕಾರ ಸಂಘಗಳ ಗತಿ ಏನು? ರೈತರಿಗೆ ಸಾಲ ಸೌಲಭ್ಯಗಳ ಅವಶ್ಯಕತೆ ಇಲ್ಲವೆ ? ಎಲ್ಲ ತರಹದ ಸಾಲ ಸೌಲಭ್ಯಗಳು ಸರಕಾರದಿಂದ ರೈತರಿಗೆ ಸಿಗುತ್ತವೆಯೋ ಎನ್ನುವುದನ್ನ ವಿರೋಧ ವ್ಯಕ್ತಪಡಿಸುವ ಸಂಘಟನೆಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಸಹಕಾರ ಸಂಘವು ಯಾವುದೇ ಸದಸ್ಯರಿಗೆ ಸಾಲ ನೀಡುತ್ತೇವೆ ಎಂದು ಯಾರ ಮನೆ ಬಾಗಿಲಿಗೆ ಹೋಗಿರುವುದಿಲ್ಲ. ಸಾಲದ ಅವಶ್ಯಕತೆ ಇರುವ ಸದಸ್ಯರು ಸಹಕಾರ ಸಂಘಕ್ಕೆ ಭೇಟಿ ನೀಡಿ ತಾವಾಗಿಯೇ ಸಾಲ ಭದ್ರತೆ ನೀಡಿ ಸಾಲ ಪಡೆದುಕೊಂಡಿರುತ್ತಾರೆ. ಆದರೆ ಪಡೆದುಕೊಂಡ ಸಾಲವು ಕಟಬಾಕಿಯಾಗಿ, ಮರುಪಾವತಿ ಮಾಡುವ ಸಂದರ್ಭದಲ್ಲಿ ಯಾವುದೋ ಸಂಘಟನೆಯ ಮೊರೆ ಹೋಗುವುದು ಸರಿಯಲ್ಲ. ಆ ಸಂಘಟನೆಗಳು ಬಂದು ಸಹಕಾರ ಸಂಘಗಳಿಗೆ ತೊಂದರೆ ಕೊಡುವುದು ಯಾವ ನ್ಯಾಯ ? ಆದ್ದರಿಂದ ಈ ರೀತಿ ಆಗುವ ತೊಂದರೆಗಳಿಗೆ ತಾಲೂಕಾ ಆಡಳಿತವು ಸಹಕಾರಿ ಸಂಘಗಳು ಸಾಲ ವಸೂಲಿ ಸಂದರ್ಭದಲ್ಲಿ ಕಾನೂನು ಅಡಿಯಲ್ಲಿ ಸಹಕರಿಸಿ ಅವುಗಳ ಬೆಳವಣಿಗೆಗೆ ಸಹಕರಿಸಬೇಕೆಂದು ಸಹಕಾರಿಗಳು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿರ್ದೇಶಕ ಡಾ. ಸಂಜಯ ಹೊಸಮಠ, ತಮ್ಮಣ್ಣ ಕೆಂಚರಡ್ಡಿ, ಲೆಕ್ಕಪರಿಶೋಧಕ ಸೈದಪ್ಪಾ ಗದಾಡಿ, ಸವರಾಜ ಬಡಿಗೇರ, ಮಲ್ಲಪ್ಪ ಗಾಣಿಗೇರ, ಮಲ್ಲಪ್ಪ ಮದಗುಣಕಿ, ಶಿವಬಸು ಹಂದಿಗುಂದ, ಸಿ.ಎಸ್. ಬಗನಾಳ, ಅರ್ಜುನ ಗಾಣಿಗೇರ,
ವಿ.ಎಚ್. ಬಾಲರಡ್ಡಿ, ಮರಿಯಪ್ಪ ಮರೆಪ್ಪಗೋಳ ಮಾತನಾಡಿದರು.
ತಾಲ್ಲೂಕಿನ ವಿವಿಧ ಸಹಕಾರಿ ಸಂಘಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಕಾನೂನು ಸಲಹೆಗಾರರಾದ ವಕೀಲರು, ಸಂಘಗಳ ವ್ಯವಸ್ಥಾಪಕರು, ಸಿಬ್ಬಂದಿಯವರು ಭಾಗವಹಿಸಿದ್ದರು.