ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಾಳಪ್ಪ ಬಿ. ಬೆಳಕೂಡ ಅವರ ತೊಟದಲ್ಲಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದವರ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಕಬ್ಬು ಹಾಗೂ ಅರಿಷಿಣ ಬೆಳೆಯ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕಿರಣದ ಉದ್ಘಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಣ್ಣಿಗೂ ಜಿವವಿದ್ದು ಅವೈಜ್ಞಾನಿಕವಾಗಿ ರಾಸಾಯನಿಕ ಹಾಗೂ ಕ್ರೀಮಿನಾಶಕಗಳನ್ನು ಹಾಕಿ ಮಣ್ಣನ್ನು ಹಾಳಾಮಾಡುತ್ತಿರುವೆವು ಎಂದರು.
ರೈತರು ಕಬ್ಬಿನ ರವದಿಗೆ ಬೆಂಕಿ ಹಚ್ಚುವುದರಿಂದ ತಾಪಮಾನ ಹೆಚ್ಚಾಗಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಸಾವಪ್ಪುತ್ತವೆ. ರೈತರು ಮಣ್ಣಿನ ಸಂರಕ್ಷಣೆ ಮತ್ತು ಅದರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಬೇಕು. ವಿಷಯುಕ್ತ ಆಹಾರ ಸೇವನೆಯಿಂದ ಮುನಷ್ಯನ ಅಯುಷ್ಯ ಕ್ಷೀಣಿಸುತ್ತಿದೆ. ರೈತರು ಜಾನುವಾರುಗಳನ್ನು ಹಾಗೂ ದೇಸಿ ಹಸು ಸಾಕಿ ಅವುಗಳಿಂದ ದೊರೆಯುವ ಸೆಗಣಿ, ಗಂಜಳ ಬಳಸಿ, ಭೂಮಿಯಲ್ಲಿ ಎರೆ ಹುಳು ವೃದ್ಧಿಸಿ ಸಾವಯವ ಕೃಷಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರವು ಕಬ್ಬಿನಲ್ಲಿ ಸಮಗ್ರ ಮಣ್ಣು ಮತ್ತು ನೀರು ನಿರ್ವಹಣೆ ನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಬೆಳಗಾವಿಯಲ್ಲಿ ಬರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಯೋಜನೆಯ ಲೋಕಾರ್ಪಣೆಯಾಗಲಿದೆ ಎಂದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥ ಗೌಡ ಎಸ್.ಆರ್. ಮಾತನಾಡಿ ಕೃಷಿಗೆ ರಾಸಾಯಣಿಕ ಗೊಬ್ಬರ ಮತ್ತು ಕ್ರೀಮಿನಾಶಕಗಳನ್ನು ಯತೇಚ್ಛವಾಗಿ ಬಳಸಿ ಬೆಳೆದ ಆಹಾರವನ್ನು ಸೇವಿಸುವುದರಿಂದ ಬಿಪಿ, ಸಕ್ಕರೆ ಕಾಯಲೆ, ಹೃದಯಘಾತ ಸೇರಿದಂತೆ ಹಲವಾರು ರೋಗ, ರುಜೀನಗಲು ಬಾಧಿಸುತ್ತವೆ. ಕಲ್ಲೋಳಿಯ ಬಾಳಪ್ಪ ಬೆಳಕೂಡ ಅವರು ಸಾವಯವ ಪದ್ದತಿಯಲ್ಲಿ ಕಬ್ಬು ಮತ್ತು ಅರಿಷಿಣ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆದಿದ್ದು ರೈತರಿಗೆ ಮಾದರಿಯಾಗಿದೆ ಎಂದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಾಳಪ್ಪ ಬೆಳಕೂಡ ಮಾತನಾಡಿ ಕಬ್ಬು ಬೆಳೆಯುವ ರೈತರು ಸಕ್ಕರೆ ಕಾರ್ಖಾನೆಯ ಕೃಷಿ ತಜ್ಞರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ತಜ್ಞರ ಸಲಹೆ ಪಡೆದುಕೊಂಡು ಕೃಷಿಯಲ್ಲಿ ಮುಂದುವರೆದರೆ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯ. ಕಬ್ಬಿನ ಇಳುವರಿ ಹೆಚ್ಚು ಪಡೆಯುವುದಕ್ಕೆ ಒಂದೇ ಮಂತ್ರ ಅದು ಹಳೆಯ ಪದ್ದತಿಯ ವಕ್ಕುಲತನ ಅಳವಡಿಸಿಕೊಳ್ಳುವುದಾಗಿದೆ ಎಂದರು.
ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗ ನಿರ್ದೇಶಕ ಡಾ. ನಂದಕುಮಾರ ಕುಂಚಗಿ, ಕರ್ನಾಟಕ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿದರು. ಕಬ್ಬು ಬೆಳೆಯ ಕುರಿತು ತುಕ್ಕಾನಟ್ಟಿಯ ಕವಿಕೆಯ ಬೇಸಾಯ ತಜ್ಞ ಎಮ್.ಎನ್. ಮಲಾವಡಿ, ಅರಿಷಿಣ ಬೆಳೆಯ ಕುರಿತು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಶಶಿಧರ ದೊಡ್ಡಮನಿ, ಸಚಿನಕುಮಾರ ನಂದಿಮಠ, ರಾಘವೇಂದ್ರ ಕೆ.ಎಸ್, ವಿ.ಡಿ. ಗಸ್ತಿ ಅವರು ಉಪನ್ಯಾಸ ನೀಡಿದರು.
ಬೆಳಗಾವಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಶಂಕರಗೌಡ ಪಾಟೀಲ ಅಧ್ಯಕ್ಷತೆವಹಿಸಿದ್ದರು.
ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಪ್ರದೇಶ ಕೃಷಿಕ ಸಮಾಜದ ಸುರೇಶ ಕಬಾಡಗಿ, ಶಂಕರಗೌಡ ಪಾಟೀಲ, ಶಿವನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ಅರವಿಂದ ಕಟಗಿ, ಶಿವಪ್ಪ ಅರಹುಣಸಿ, ನಾರಾಯಣ ಹೆಗಡೆ, ಅಶೋಕುಮಾರ ಕೂಡಲಿ, ಪ್ರವೀಣ ಹೆಬ್ಬಾರ, ಅಶೋಕ ಗದಾಡಿ, ಕೆಂಪಣ್ಣ ಕಾಡದವರ ಅತಿಥಿಯಾಗಿ ಉಪಸ್ಥಿತರಿದ್ದರು.
ಸಮಾರಂಭದ ಪೂರ್ವದಲ್ಲಿ ಕಬ್ಬು ಮತ್ತು ಅರಿಷಿಣ ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿದರು. ಹಾಲು ಹಲ್ಲಿನ ಹೋರಿಗಳ ಪ್ರದರ್ಶನದಲ್ಲಿ ಉತ್ತಮ ಹೋರಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಸಾವಿರಕ್ಕೂ ಅಧಿಕ ರೈತರು, ಅರಭಾವಿ ತೋಟಗಾರಿಕೆ ಕಾಲೇಜು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ರಮೇಶ ಭಾಗೋಜಿ, ಶಂಕರ ನಿಂಗನೂರ ನಿರೂಪಿಸಿದರು, ಕ್ಷೇತ್ರೋತ್ಸವ ಆತಿಥ್ಯವಹಿಸಿದ್ದ ಬಸವರಾಜ ಬಿ. ಬೆಳಕೂಡ ವಂದಿಸಿದರು.
IN MUDALGI Latest Kannada News