ದಿ.ಸುರೇಶ ಅಂಗಡಿ ಅವರಿಗೆ ಅರಭಾವಿ ಬಿಜೆಪಿ ಮಂಡಲದಿಂದ ಶೃದ್ಧಾಂಜಲಿ
inmudalgi
ಸೆಪ್ಟೆಂಬರ್ 24, 2020
ತಾಲ್ಲೂಕು, ಬೆಳಗಾವಿ
ದಿ.ಸುರೇಶ ಅಂಗಡಿ ಅವರಿಗೆ ಅರಭಾವಿ ಬಿಜೆಪಿ ಮಂಡಲದಿಂದ ಶೃದ್ಧಾಂಜಲಿ
ಗೋಕಾಕ : ಬುಧವಾರ ರಾತ್ರಿ ನಿಧನರಾದ ಕೇಂದ್ರ ರೈಲ್ವೇ ಸಚಿವ ಸುರೇಶ ಅಂಗಡಿ ಅವರಿಗೆ ಅರಭಾವಿ ಬಿಜೆಪಿ ಮಂಡಲದಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ದಿ. ಸುರೇಶ ಅಂಗಡಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಮಾತನಾಡಿ, ಕೇಂದ್ರ ಸಚಿವ ಸುರೇಶ ಅಂಗಡಿ ಅವರ ನಿಧನದಿಂದ ಇಡೀ ದೇಶಕ್ಕೆ ನಷ್ಟವಾಗಿದೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅಂಗಡಿ ಅವರು, ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಒಟ್ಟು 4 ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಪ್ರಸ್ತುತ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಯಕರ್ತರೊಂದಿಗೆ ಸದಾ ಒಡನಾಟ ಹೊಂದಿದ್ದ ಅವರು ಜನ-ಸ್ನೇಹಪರ ವ್ಯಕ್ತಿಯಾಗಿದ್ದರು. ಕೊರೋನಾ ಮಹಾಮಾರಿಗೆ ಬಲಿಯಾಗಿರುವುದು ನಮ್ಮೆಲ್ಲರ ದುರ್ದೈವವೆಂದು ವಿಷಾದ ವ್ಯಕ್ತಪಡಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ಅಂಗಡಿ ಅವರು ರೈಲ್ವೇ ಸಚಿವರಾಗಿ ಕರ್ನಾಟಕಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಸಾಕಷ್ಟು ಮಹಾತ್ವಾಕಾಂಕ್ಷೆ ಹೊಂದಿದ್ದ ಅವರು ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಇವರ ನಿಧನದಿಂದ ಪಕ್ಷಕ್ಕೆ ದೊಡ್ಡ ಹಾನಿಯಾಗಿದೆ. ಮೃತರ ಆತ್ಮಕ್ಕೆ ಭಗವಂತನು ಶಾಂತಿಯನ್ನು ದಯಪಾಲಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಜಿಲ್ಲಾ ಕಾರ್ಯದರ್ಶಿ ಮುತ್ತೆಪ್ಪ ಮನ್ನಾಪೂರ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಸುಬಾಸ ಪಡದಲ್ಲಿ, ಪ್ರಭಾಶುಗರ ನಿರ್ದೇಶಕ ಮಾಳಪ್ಪ ಜಾಗನೂರ, ಎನ್‍ಎಸ್‍ಎಫ್ ಅತಿಥಿ ಗೃಹದ ಲಕ್ಕಪ್ಪ ಲೋಕುರಿ, ದಾಸಪ್ಪ ನಾಯಿಕ, ತಾಪಂ ಮಾಜಿ ಸದಸ್ಯ ನಾಗಪ್ಪ ಮಂಗಿ, ಪರಸಪ್ಪ ಗುಡೆನ್ನವರ, ಅಡಿವೆಪ್ಪ ಅಳಗೋಡಿ, ಭೀಮಶಿ ಮೋಕಾಶಿ, ಬಿಜೆಪಿ ಪದಾಧಿಕಾರಿಗಳಾದ ಲಕ್ಷ್ಮೀ ಮಾಳೇದ, ಕಮಲಾದೇವಿ ಬಡಗಾಂವಿ, ಸಿದ್ದು ಯಕ್ಕುಂಡಿ, ಸಿದ್ಧಾರೂಢ ಜಮನಾಳ, ಮಂಗಲಾ ಕೌಜಲಗಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.