ಪಂಚಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಈರಪ್ಪ ಬೆಳಕೂಡ ಪ್ರತಿಕ್ರಿಯೆ
‘ಪಂಚಮಸಾಲಿ ಶ್ರೀಗಳ ಮಾತು ಗೌರವ ತರುವಂತದಲ್ಲ’
ಮೂಡಲಗಿ: ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳು ಕೊಲೆ ಆಪಾದನೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸುತ್ತಿರುವುದು ಸ್ವಾಮೀಜಿಗಳಿಗೆ ಗೌರವ ತರುವಂತದಲ್ಲ ಎಂದು ಕರ್ನಾಟಕ ರಾಜ್ಯ ಪಂಚಮಸಾಲಿ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲೋಳಿಯ ಈರಪ್ಪ ಬೆಳಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಮಾಜಗಳನ್ನು ಪ್ರತಿನಿಧಿಸುವ ಸ್ವಾಮೀಜಿಗಳು ಎಲ್ಲರಿಗೂ ಸಮಾನರಾಗಿ ತಮ್ಮ ವರ್ತನೆಗಳು ಇರಬೇಕು. ಸ್ವಾಮೀಜಿಗಳು ಮತ್ತು ಮಠಮಾನ್ಯಗಳು ರಾಜಕೀಯ ಮಾಡುವಂತಾದರೆ ಸ್ವಾಮೀಜಿಗಳಿಗೆ ಯಾವ ಬೆಲೆ ಬರುತ್ತದೆ ಎಂದು ತಿಳಿಸಿದ್ದಾರೆ.
ಕೊಲೆಯಾಗಿರುವ ಉದಯಗೌಡ ಗೌಡ ಪ್ರಕರಣದಲ್ಲಿ ನ್ಯಾಯಾಂಗವು ತನ್ನ ಕಾರ್ಯ ನಿರ್ವಹಿಸುತ್ತಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಇಡೀ ಪಂಚಮಸಾಲಿ ಸಮಾಜವನ್ನು ವಿನಯ ಕುಲಕರ್ಣಿ ಅವರಿಗೆ ಅರ್ಪಿಸಿದಂತೆ ಮಾತನಾಡುವ ಉಭಯ ಶ್ರೀಗಳು ಪಂಚಮಸಾಲಿ ಸಮಾಜದ ಗೌರವ ತೆಗೆಯುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಉದಯಗೌಡ ಸಹ ಪಂಚಮಸಾಲಿ ಸಮಾಜದ ವ್ಯಕ್ತಿಯಾಗಿದ್ದು, ಅವರ ಕುಟುಂಬಕ್ಕೆ ಸಾಂತ್ವನ ಹೇಳದೆ, ಶಾಸಕ, ಮಾಜಿ ಮಂತ್ರಿ ಎನ್ನುವ ಕಾರಣಕ್ಕೆ ವಿನಯ ಕುಲಕರ್ಣಿ ಪರ ಸ್ವಾಮೀಜಿಗಳು ಬಲವಾಗಿ ವಾದಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಶ್ರೀಗಳು ಯೋಚಿಸಬೇಕು. ಸಮಾಜದ ಆಸ್ತಿಯಾಗಿರುವ ಸ್ವಾಮೀಜಿಗಳು ಸಮಾಜದ ಗೌರವಕ್ಕೆ ಚ್ಯುತಿ ಬಾರದಂತೆ ತಮ್ಮ ನುಡಿಗಳು ಇರಲಿ ಎಂದು ಬೆಳಕೂಡ ತಿಳಿಸಿದ್ದಾರೆ.
