ಬೆಳಗಾವಿ: ದೇಶದ ಪ್ರತಿಯೊಬ್ಬ ನಾಗರಿಕನು ಈ ನೆಲದ ಸಂವಿಧಾನದ ನಿಯಮಗಳನ್ನು ಪಾಲಿಸುವುದೇ ನಾವೆಲ್ಲರೂ ಈ ದೇಶಕ್ಕೆ ನೀಡುವ ಅತಿ ದೊಡ್ಡಗೌರವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿಯ ದಂಡು ಮಂಡಲ ಪ್ರದೇಶದ ಮುಖ್ಯ ಕಛೇರಿ ಆವರಣದಲ್ಲಿ ಮಂಗಳವಾರ (ಜ.26) ರಂದು 72ನೇ ಗಣರಾಜ್ಯೋತ್ಸವ ನಿಮಿತ್ಯ ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು 1950 ಜನವರಿ 26ರಂದು ಭಾರತದ ಸಂವಿಧಾನವನ್ನು ಅನುಮೋಧಿಸಿ ಜಾರಿಗೆ ತಂದಿದ್ದಕ್ಕಾಗಿ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯ ದಿನಾಚರಣೆ ಆಚರಿಸುತ್ತೇವೆ ಎಂದರು.
ಡಾ. ರಾಜೇಂದ್ರ ಪ್ರಸಾದ ಮತ್ತು ಡಾ. ಬಿ.ಆರ್. ಅಂಬೇಡ್ಕರ ಅವರ ನೇತೃತ್ವದಲ್ಲಿ 7 ಸದಸ್ಯರ ಆಯೋಗ ಸುಮಾರು 60 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿದರು. ನಮ್ಮ ಸಂವಿಧಾನ ನಮಗೆ ನೀಡಿರುವ ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತು ನಿಭಾಯಿಸುವ ಮೂಲಕ ಸಂವಿಧಾನದ ಆಶಯಗಳನ್ನು ಅರ್ಥಪೂರ್ಣಗೊಳಿಸಬೇಕು ಎಂದು ಹೇಳಿದರು.
ಪ್ರಾಂತ, ಭಾಷೆ, ಜಾತಿ, ಧರ್ಮಗಳ ವಿಭಿನ್ನತೆಯಿಂದ ಕೂಡಿದ ದೇಶ ನಮ್ಮದಾಗಿದೆ. ಆದರೆ ದೇಶದಲ್ಲಿ ವಾಸಿಸುವ ನಮ್ಮೆಲ್ಲರಿಗೂ ಇರುವುದು ಒಂದೇ ಸಂವಿಧಾನ. ಸಂವಿಧಾನದಿಂದ ನಾವು ಕಲಿಯಬೇಕಾಗಿರುವ ಪ್ರಥಮ ಪಾಠ ಜವಾಬ್ದಾರಿಯ ಅರಿಯುವಿಕೆ ಪ್ರಜೆಗಳು, ಪ್ರಜಾಪ್ರತಿನಿಧಿಗಳು ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು.
ಡಾ.ಬಿ.ಆರ್. ಅಂಬೇಡ್ಕರ ಅವರು ನಮ್ಮ ದೇಶಕ್ಕೆ ಉತ್ಕøಷ್ಟ ಸಾಂವಿಧಾನವನ್ನು ನೀಡುವ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆಯ ಉದ್ದಾರಕ್ಕಾಗಿ ಸಮಾನ ಅವಕಾಶ ನೀಡಿದ್ದಾರೆ ಹೀಗಾಗಿ ಜಾತಿ, ಮತ, ಪಂಥಗಳ ಬೇಧ ತೊರೆದು ಸಾಮರಸ್ಯ ಭಾವನೆಯಿಂದ ನಾವೆಲ್ಲರೂ ಬದುಕಿ ಅವರಿಗೆ ಗೌರವ ಸಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ದಂಡು ಮಂಡಳಿ ಉಪಾಧ್ಯಕ್ಷೆ ನಿರಂಜನಾ ಅಷ್ಟೇಕರ, ಸಿಇಒ ಬರ್ಚೆಸ್ವಾ, ಸದಸ್ಯರಾದ ಅಲ್ಲಾವುದ್ದೀನ ಖಿಲ್ಲೇದಾರ, ಸಾಜೀದ್ ಶೇಖ್, ಡಾ.ಮದನ ಡೊಂಗ್ರೆ, ವಿಕ್ರಮ ಪುರೋಹಿತ, ಸೇರಿದಂತೆ ಅಧಿಕಾರಿಗಳು, ಶಾಲಾ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.