ಅ.5 ರಂದು ಗೋಕಾಕ-ಮೂಡಲಗಿ ತಾಲೂಕಿನಾದ್ಯಂತ ಮತ್ತೊಮ್ಮೆ ಕೋವಿಡ್ ಲಸಿಕಾ ಕಾರ್ಯಕ್ರಮ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕೊರೋನಾ ತಡೆಗಟ್ಟಲಿಕ್ಕೆ ಬರುವ ಮಂಗಳವಾರದಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಮತ್ತೊಮ್ಮೆ ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದನ್ನು ಯಶಸ್ವಿಯಾಗಿ ಜಾರಿಗೊಳಿಸುವಂತೆ ಅರಭಾವಿ ಶಾಸಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾನುವಾರ ಸಂಜೆ ಮಾಧ್ಯಮಗಳಿಗೆ ಈ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಇತರೇ ತಾಲೂಕುಗಳನ್ನು ಹೋಲಿಸಿದರೆ ಗೋಕಾಕ-ಮೂಡಲಗಿ ತಾಲೂಕಿನಲ್ಲಿ ಲಸಿಕೆ ಕಾರ್ಯಕ್ರಮವು ಇನ್ನೂ ಯಶಸ್ವಿಯಾಗಬೇಕಿದೆ. ಆದ್ದರಿಂದ ಶೇ 100 ರಷ್ಟು ಈ ಅಭಿಯಾನವನ್ನು ಯಶಸ್ವಿಗೊಳಿಸಲು ಅವರು ಸೂಚಿಸಿದ್ದಾರೆ.
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಕೋವಿಡ್ ಲಸಿಕೆ ಮಹತ್ವದ್ದಾಗಿದ್ದು, ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿರುವ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದೇ ಮಂಗಳವಾರದಂದು ಮತ್ತೊಮ್ಮೆ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಲಸಿಕೆ ಪಡೆಯದ 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯುವಂತೆ ಕೋರಿಕೊಂಡಿರುವ ಅವರು, ಈ ಅಭಿಯಾನವನ್ನು ಯಶಸ್ವಿಯಾಗಿ ನಿಭಾಯಿಸಲು ಆರೋಗ್ಯ ಇಲಾಖೆಯ ಜೊತೆಗೆ ಇತರೇ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೈ ಜೋಡಿಸುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೂಚನೆ ನೀಡಿದ್ದಾರೆ.