ಶ್ರದ್ಧೆ, ಪರಿಶ್ರಮದಿಂದ ಯಶಸ್ಸು ಸಾಧ್ಯ
ಮೂಡಲಗಿ: ‘ಶ್ರದ್ದೆ ಮತ್ತು ಪರಿಶ್ರಮಪಟ್ಟರೆ ಖಂಡಿತ ಯಶಸ್ಸು ದೊರೆಯುತ್ತದೆ’ ಎಂದು ಜಮಖಂಡಿಯ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳಿ ಹೇಳಿದರು.
ಇಲ್ಲಿಯ ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ 2021-22ನೇ ಸಾಲಿನ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಯ ಅಧ್ಯಯನದ ಅವಧಿಯನ್ನು ವ್ಯರ್ಥ ಮಾಡಿಕೊಳ್ಳದೆ ತಪಸ್ಸಿನಂತೆ ಓದಿದರೆ ಮಾತ್ರ ಫಲ ದೊರೆಯುವುದು ಎಂದರು.
ಅತಿಥಿ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ ವಿದ್ಯಾರ್ಥಿಗಳಿಗೆ ಭವಿಷ್ಯತ್ತಿನ ಗುರಿ ಇರಬೇಕು, ಗುರಿಯನ್ನು ಮುಟ್ಟುವವರೆಗೆ ಕಠಿಣ ಪ್ರಯತ್ನ ಮಾಡಿದರೆ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅತಿಥಿ ಪ್ರೊ.ಎಸ್.ಎಂ. ಕಮದಾಳ ಮಾತನಾಡಿ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿದ್ದು ಅಂಥ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ ಸಾಯಿ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜುದಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕ ಡಿ.ವಿ. ಮಟ್ಟಿಕಲ್ಲಿ, ಪ್ರಾಚಾರ್ಯ ಪಿ.ಎಂ. ಕುಲಗೋಡ, ವಿಜ್ಞಾನ ವಿಭಾಗದ ಪಿ.ಎಂ. ಮೇಟಿ, ವಾಣಿಜ್ಯ ವಿಭಾಗದ ಜಿ.ಎಸ್. ಶಿವಾಪುರ ಇದ್ದರು.