ಮೂಡಲಗಿ ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ಜರುಗಿದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಚನ್ನಮ್ಮನ್ನ ಕಿತ್ತೂರಿನ ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡ್ರ ಮಾತನಾಡಿದರು. ಶ್ರೀಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಚಿತ್ರದಲ್ಲಿರುವರು.
———————–
ಮೂಡಲಗಿ: ‘12ನೇ ಶತಮಾನದಲ್ಲಿ ಸಿದ್ದರಾಮ ಶಿವಯೋಗಿಯವರು ಸಾಮಾಜಿಕ ಚಿಂತನೆಗಳ ಮೂಲಕ ಕಾಯಕದ ಮಹತ್ವವನ್ನು ಸಾರಿದ್ದರು’ ಎಂದು ಚನ್ನಮ್ಮನ್ನ ಕಿತ್ತೂರಿನ ಕನ್ನಡ ಸಾಹಿತ್ಯ ಪರಿಷತ್ತ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡ್ರ ಅವರು ಹೇಳಿದರು.
ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ಅಮವಾಸ್ಯೆಯ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ‘ಸೊನ್ನಲಗಿ ಸಿದ್ದರಾಮ ಶಿವಯೋಗಿ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು 12ನೇ ಶತಮಾನದ ಬಸವಾದಿ ಶರಣರು ಜಗತ್ತಿಗೆ ಮೌಲಿಕ ಸಂದೇಶಗಳನ್ನು ನೀಡಿದ್ದಾರೆ ಮತ್ತು ಮಾನವ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವ ದಾರಿಯನ್ನು ಸ್ಪಷ್ಟಗೊಳಿಸಿದ್ದಾರೆ ಎಂದರು.
ಸೊನ್ನಲಗಿಯ ಸಿದ್ಧರಾಮರು ಕಟ್ಟಿಸಿದ ಕೆರೆಕಟ್ಟೆಗಳು ಸಾವಿರ ವರ್ಷ ಕಳೆದರೂ ಜನೋಪಯೋಗಿ ಆಗಿವೆ. ಮಾನವತ್ವದಿಂದ ದೈವತ್ವಕ್ಕೇರುವ ಅವರ ಸಾತ್ವಿಕ ಜೀವನದ ಚರಿತ್ರೆಯು ಸರ್ವಕಾಲಿಕವಾಗಿ ಜನರ ಬದುಕಿಗೆ ದಾರಿದೀಪವಾಗಿದೆ ಎಂದರು.
ಇಂದಿನ ಯಾಂತ್ರಿಕ ಕಾಲದಲ್ಲಿ ಸಾಧು, ಸಂತರ ದರ್ಶನ, ಧಾರ್ಮಿಕ ಚಿಂತನ, ಕಥನ ಆಲಿಸುವಿಕೆ ಹಾಗೂ ಆಧ್ಯಾತ್ಮದ ಸಂಗದಿಂದ ಮನುಷ್ಯ ನೆಮ್ಮದಿಯನ್ನು ಪಡೆಯಲು ಸಾಧ್ಯ ಎಂದರು.
ಸಾನ್ನಿಧ್ಯವಹಿಸಿದ್ದ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ ಶರಣರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಸುಂದರವಾಗಿರುತ್ತದೆ ಎಂದರು.
ಅತಿಥಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ನಿಲಯ ಪಾಲಕ ದುರದುಂಡೆಪ್ಪ ಗೌಡಿ ಹಾಗೂ ಕಾಶಪ್ಪ ಸಿಂಗನ್ನವರ ಅವರನ್ನು ಸನ್ಮಾನಿಸಿದರು.
ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕ ಅಪ್ಪಾಸಾಹೇಬ ಕುರುಬರ, ಓಂಕಾರ ಕರಕುಂಬಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪ್ರೊ. ವಿ.ಕೆ. ನಾಯಿಕ ನಿರೂಪಿಸಿದರು. ಮಠದ ಸದ್ಭಕ್ತರಿಂದ ದಾಸೋಹ ಜರುಗಿತು.