ಬಿಜೆಪಿ ಕಾರ್ಯಕರ್ತರಿಂದ ನಿವೃತ್ತ ಯೋಧನಿಗೆ ಸತ್ಕಾರ
ಬನವಾಸಿ: ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆಗೈದು ಇತ್ತಿಚಿಗೆ ನಿವೃತ್ತರಾದ ಭಾಶಿ ಗ್ರಾಮದ ಯೋಧ ಶಿವಪ್ಪ ಬಡಿಗೇರ ಅವರನ್ನು ಬನವಾಸಿಯ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖ ದ್ಯಾಮಣ್ಣ ದೊಡಮನಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ. ಅದು ಪುಣ್ಯವಂತರಿಗೆ ಮಾತ್ರ ದೊರೆಯುತ್ತದೆ. ಅಂತಹ ಪುಣ್ಯವಂತರಲ್ಲಿ ಯೋಧ ಶಿವಪ್ಪ ಬಡಿಗೇರ ಅವರು ಸಹ ಒಬ್ಬರು. ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ದೇಶ ಸೇವೆಗೈದ ಇವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯುವ ಪೀಳಿಗೆ ಇವರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ಗ್ರಾಮೀಣ ಭಾಗದ ಯುವಕರು ಸೇನೆಯನ್ನು ಸೇರುವ ಇಚ್ಛ ಶಕ್ತಿ ಹೊಂದಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಅರವಿಂದ ಬಳಿಗಾರ ಮಾತನಾಡಿ, ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರನ್ನು ಎಲ್ಲರು ಗೌರವದಿಂದ ಕಾಣಬೇಕು. ಗ್ರಾಮೀಣ ಭಾಗದಲ್ಲಿ ಸೇನೆಗೆ ಸೇರುವುದು ವಿರಳ, ನಿವೃತ್ತ ಸೈನಿಕರು ಯುವಕರಲ್ಲಿ ದೇಶಪ್ರೇಮ ತುಬುವುದರೊಂದಿಗೆ ಭಾರತೀಯ ಸೇನೆಯನ್ನು ಸೇರುವÀಂತೆ ಪ್ರೇರೆಪಿಸುವ ಕಾರ್ಯ ಮಾಡಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಸುಧೀರ ನಾಯರ್ ಮಾತನಾಡಿ, ನಮ್ಮ ಸೈನಿಕರು ಹಗಲಿರುಳು ಎನ್ನದೇ ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ನಾವು ಇಂದು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೆವೆ. ಸೈನಿಕರು ನಮ್ಮ ಪಾಲಿನ ದೇವರು ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ನಿವೃತ್ತ ಯೋಧ ಶಿವಪ್ಪ ಬಡಿಗೇರ ಸೇನೆಯಲ್ಲಿ ಸೇವೆಗೈದ ಅನುಭವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಶಿ ಗ್ರಾ.ಪಂ ಮಾಜಿ ಅಧ್ಯಕ್ಷ ಶಂಕರ ಗೌಡ, ಪ್ರಮುಖರಾದ ಶಿವಕುಮಾರ ಗೌಡ, ಗಣಪತಿ ನಾಯ್ಕ್, ದತ್ತತ್ರೇಯ ಭಟ್ಟ, ಪ್ರಶಾಂತ ಶೇಟ್, ವಿರೇಂದ್ರ ಗೌಡ, ಜಯಶಂಕರ ಮೇಸ್ತ್ರಿ, ಸಿದ್ದಲಿಂಗೇಶ ಕಬ್ಬೂರ ಮತ್ತಿತರರು ಉಪಸ್ಥಿತರಿದ್ದರು.