*ಪ್ರಧಾನಿ ನರೇಂದ್ರ ಮೋದಿಯವರ ನವ-ಕರ್ನಾಟಕ ಸಂಕಲ್ಪ ಸಮಾವೇಶ*
*ಬಾಲಚಂದ್ರ ಜಾರಕಿಹೊಳಿ, ಕೋರೆ, ಕತ್ತಿಯವರಿಗೂ ತಟ್ಟಿದ ಟ್ರಾಫಿಕ್ ಬಿಸಿ.*
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಕುಡಚಿ ಕ್ಷೇತ್ರದ ಹಾರುಗೇರಿ ಕ್ರಾಸ್ ಯಬರಟ್ಟಿ ಹತ್ತಿರ ನಡೆದ
ನವ-ಕರ್ನಾಟಕ ಸಂಕಲ್ಪ ಸಮಾವೇಶಕ್ಕೆ ಸಹಸ್ರಾರು ಕಾರ್ಯಕರ್ತರು ಜಮಾಯಿಸಿ ರಸ್ತೆ ಉದ್ದಗಲಕ್ಕೂ ವಾಹನಗಳ ದಟ್ಟನೆಯಿಂದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಡಾ|| ಪ್ರಭಾಕರ ಕೋರೆ ಸಹಿತ ಸಿಲುಕಿ ಪರದಾಡುವಂತಹ ಸನ್ನಿವೇಶ ಎದುರಾಯಿತು.
ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಚುನಾವಣಾ ಪ್ರಚಾರಾರ್ಥವಾಗಿ ಕುಡಚಿ ಕ್ಷೇತ್ರದಲ್ಲಿ ರಾಯಬಾಗ ತಾಲೂಕಿನ ಯಬರಟ್ಟಿ ಹತ್ತಿರ ಆಯೋಜಿತಗೊಂಡಿದ್ದ ಸಮಾವೇಶದಲ್ಲಿ ಭಾಗಿಯಾಗಲು ಶಾಸಕ ಹಾಗೂ ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದರಾದ ಡಾ|| ಪ್ರಭಾಕರ ಕೋರೆ, ರಮೇಶ ಕತ್ತಿ, ತೇರದಾಳ ಶಾಸಕ ಸಿದ್ದು ಸವದಿ, ಹುಕ್ಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಖಿಲ ಕತ್ತಿ ಅವರು ಹೊರಟಿದ್ದ ಸಂದರ್ಭದಲ್ಲಿ ಟ್ರಾಫಿಕ್ ಜ್ಯಾಮ್‍ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಹಿಡಕಲ್ ಹತ್ತಿರ ಸಿಲುಕಿ ಪರದಾಡಿದರು.ಹಿಡಕಲ್‍ದಿಂದ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಸಮಾವೇಶದ ಸ್ಥಳದ ವರೆಗೆ ಟ್ರಾಫಿಕ ಜ್ಯಾಮ್ ಉಂಟಾಯಿತು. ಈ ಹಿನ್ನಲೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಸಹಿತ ಗಣ್ಯರು ಸಮಾವೇಶದ ಸ್ಥಳಕ್ಕೆ ತಡವಾಗಿ ತೆರಳಿದರೂ ವೇದಿಕೆಯನ್ನು ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯರನ್ನು ಕಾರ್ಯಕ್ರಮ ಮುಗಿದ ಬಳಿಕ ಬಾಲಚಂದ್ರ ಜಾರಕಿಹೊಳಿ ಅವರು ಭೇಟಿ ಮಾಡಿ ಉಭಯ ಕುಶಲೋಪಚಾರ ನಡೆಸಿದರು.