ಬೆಳಗಾವಿ: ಡಿಸಿಸಿ ಬ್ಯಾಂಕ್‌ಗೆ ಅಕ್ಟೋಬರ್ 19ರಂದು ಚುನಾವಣೆ ಜರುಗಲಿದ್ದು, ಈಗಾಗಲೇ ನಾವು ಖಾನಾಪುರ ತಾಲೂಕು ಕೇಂದ್ರದಿಂದ ಚುನಾವಣೆ ಪ್ರಚಾರವನ್ನು ಆರಂಭಿಸಿದ್ದೇವೆ. ರೈತರ ಪ್ರಗತಿ ಮತ್ತು ಭವಿಷ್ಯದ ಅನುಕೂಲಕ್ಕಾಗಿ ನಮ್ಮ ಪ್ಯಾನಲ್ ಅನ್ನು ಗೆಲ್ಲಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ರೈತರ ಶ್ರೆಯೋಭಿವೃದ್ಧಿಗೆ ಶ್ರಮಿಸಲು ಹೆಚ್ಚಿನ ಶಕ್ತಿ ಬಂದಂತಾಗುತ್ತದೆ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.
ನಗರದ ಧರ್ಮನಾಥ ಭವನದಲ್ಲಿ ಶುಕ್ರವಾರ ನಡೆದ ಬೆಳಗಾವಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆಯಲ್ಲಿ ಅವರು ಮಾತನಾಡಿದರು. ಅಕ್ಟೋಬರ್ 19ರಂದು ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ವೇಳೆ 13 ಸ್ಥಾನಗಳಲ್ಲಿ ನಮ್ಮ ಪೆನಲ್‌ನ ಅಭ್ಯರ್ಥಿಗಳು ಗೆಲ್ಲುವ ಮೂಲಕ ಬಿಡಿಸಿಸಿ ಬ್ಯಾಂಕ್‌ನ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಚುನಾವಣೆಯು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಂಸದ
ಡಾ. ಪ್ರಭಾಕರ ಕೋರೆ, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಮಾಜಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಮಾಡುತ್ತಿದ್ದೇವೆ ಎಂದ ಅವರು, ಇಲ್ಲಿ ಯಾವುದೇ ರಾಜಕೀಯ ಪಕ್ಷಗಳು ಇಲ್ಲ. ಚುನಾವಣೆಯು ಪಕ್ಷಾತೀತ, ಜ್ಯಾತ್ಯತೀತವಾಗಿ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಈ ಪೆನಲ್‌ನಲ್ಲಿ ಇದ್ದಾರೆ. ಎಲ್ಲರೂ ಒಟ್ಟಾಗಿ ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಎದುರಿಸಲಿದ್ದು, ನಮಗೆ ರೈತರ ಸೇವೆಗೆ ಅವಕಾಶ ಒದಗಿ ಬರಲಿದೆ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಮೂಲಕ ಮುಂದಿನ ದಿನಗಳಲ್ಲಿ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ದೊರಕಿಸುವ ಪ್ರಯತ್ನ ಮಾಡುತ್ತೇವೆ ಎಂದ ಅವರು, ಈಗಾಗಲೇ ಬ್ಯಾಂಕ್‌ನಲ್ಲಿ ₹6000 ಕೋಟಿ ಠೇವಣಿ ಸಂಗ್ರಹವಾಗಿದ್ದು, ಮುಂದೆ ಅದನ್ನು ₹8000 ಕೋಟಿವರೆಗೆ ಏರಿಸುವ ಗುರಿಯನ್ನು ಹೊಂದಿದ್ದೇವೆ. ಜತೆಗೆ ಠೇವಣಿ ಇಡುವ ರೈತರಿಗೆ ನಬಾರ್ಡ್ ಬ್ಯಾಂಕಿನ ಜತೆಗೆ ಚರ್ಚೆ ಮಾಡಿಕೊಂಡು ಅವರಿಗೆ ಹೆಚ್ಚಿನ ಬಡ್ಡಿ ದರವನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಈಗಾಗಲೇ ₹3400 ಕೋಟಿ ಹಣವನ್ನು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ನೀಡಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಬೆಳೆಸಾಲ ನೀಡಿದ್ದು ಬೆಳಗಾವಿ ಡಿಸಿಸಿ ಬ್ಯಾಂಕ್ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ರೈತರಿಗೆ ಟ್ರ್ಯಾಕ್ಟರ್ ಸಾಲ, ಗೃಹ ಸಾಲ, ವಾಹನ ಸಾಲ ನೀಡಲು ಕೂಡ ಚಿಂತನೆ ಮಾಡುತ್ತಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇಂತಹ ಸೌಲಭ್ಯಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತಿರುವದರಿಂದ ರೈತರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಕ್ಕೆ ಚಿಂತಿಸುತ್ತಿದ್ದೇವೆ ಎಂದು ಹೇಳಿದರು.
ಅಪ್ಪಾಸಾಹೇಬ ಕುಲಗೋಡೆ ಅವರು ಬಿಡಿಸಿಸಿ ಬ್ಯಾಂಕ್‌ಗೆ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಬಹಳ ಜನ ಚರ್ಚೆ ಮಾಡುತ್ತಿದ್ದರು. ಬ್ಯಾಂಕ್ ಅನ್ನು ಸರಿಯಾಗಿ ನಡೆಸುತ್ತಾರೋ? ಇಲ್ಲವೋ? ಎನ್ನುವುದೇ ಅವರ ಚಿಂತೆಯಾಗಿತ್ತು. ಆದರೆ, ಇವರು ಅಧ್ಯಕ್ಷರಾಗಿ ಬಂದ ನಂತರ ಬಿಡಿಸಿಸಿ ಬ್ಯಾಂಕ್‌ಗೆ ₹280 ಕೋಟಿಗೂ ಅಧಿಕ ಹಣ ಠೇವಣಿ ಸಂಗ್ರಹವಾಯಿತು ಎಂದು ಹೇಳಿದರು.
ಮುಂದಿನ ದಿನಮಾನಗಳಲ್ಲಿ ರೈತರೆಲ್ಲರ ಸಹಕಾರ ಮತ್ತು ಆಶೀರ್ವಾದದಿಂದ ಅಕ್ಟೋಬರ್ 19ರ ಚುನಾವಣೆಯಲ್ಲಿ ನಮ್ಮ ಪೆನಲ್ ವತಿಯಿಂದ ಸ್ಪರ್ಧೆ ಮಾಡಿದವರೇ ಗೆದ್ದು ಬರಲಿದ್ದಾರೆ. ನಂತರ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ಮಾಣಗೊಂಡ ಬಳಿಕ ರೈತರ ಪರವಾಗಿಯೇ ಕೆಲಸಗಳನ್ನು ಮಾಡುತ್ತೇವೆ. ಸಾಲವಾಗಲಿ, ಠೇವಣಿ ಸಂಗ್ರಹವಿರಲಿ, ಬಡ್ಡಿಯನ್ನು ಹೊಂದಾಣಿಕೆ ಮಾಡುವುದು ಸೇರಿದಂತೆ ಬಿಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಎಷ್ಟು ಅನುಕೂಲ ಮಾಡಲು ಸಾಧ್ಯವಿದೆಯೋ ಅದೆಲ್ಲವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೆಳಗಾವಿ ಗ್ರಾಮೀಣ ತಾಲೂಕು ಕ್ಷೇತ್ರದಿಂದ ರಾಜು ಅಂಕಲಗಿ ನಿರ್ದೇಶಕರಾಗಿ ಆಯ್ಕೆಯಾದ ನಂತರ ಅವರು ₹10 ಕೋಟಿಯಿಂದ ₹110 ಕೋಟಿವರೆಗೆ ರೈತರಿಗೆ ಸಾಲವನ್ನು ನೀಡಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ರೈತರ ಶ್ರೇಯೋಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿಯೇ ಬ್ಯಾಂಕ್ ಅನ್ನು ಮತ್ತಷ್ಟು ಎತ್ತರಕ್ಕೆ ಬೆಳೆಯಲು ದುಡಿಯಲು ನಮ್ಮ ಪೆನಲ್ ಸಿದ್ಧವಾಗಿದೆ ಎಂದು ತಿಳಿಸಿದರು.
ಈ ವೇಳೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ, ಬ್ಯಾಂಕ್ ನಿರ್ದೇಶಕರಾದ ಮಾಜಿ ಶಾಸಕ ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಬೆಳಗಾವಿ ಮಾಜಿ ಮಹಾಪೌರ ಶಿವಾಜಿ ಸುಂಠಕರ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಸತೀಶ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ವಿಕ್ರಮ ಇನಾಂದಾರ, ಬೆಳಗಾವಿ ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರಗೌಡ ಪಾಟೀಲ ಹಾಜರಿದ್ದರು.
ಅಕ್ಟೋಬರ್ 19ರಂದು ಬಿಡಿಸಿಸಿ ಬ್ಯಾಂಕ್‌ಗೆ ಚುನಾವಣೆ ನಡೆಯಲಿದ್ದು, ನಮ್ಮ ಪೆನಲ್ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಜತೆಗೆ ರೈತರ ಹಿತಕ್ಕಾಗಿ ಬಿಡಿಸಿಸಿ ಬ್ಯಾಂಕ್ ಮೂಲಕ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಸಂಕಲ್ಪ ಮತ್ತು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ರೈತರ ಸಹಕಾರ ಕೂಡ ಇದಕ್ಕೆ ಅಗತ್ಯವಾಗಿ ಬೇಕಿದೆ.
*-ಬಾಲಚಂದ್ರ ಜಾರಕಿಹೊಳಿ, ಬೆಮುಲ್ ಅಧ್ಯಕ್ಷ ಹಾಗೂ ಶಾಸಕ*