ಊಧೋ..ಊಧೋ..ಊಧೋ..ಯಲ್ಲಮ್ಮ ನಿನ್ನ ಹಾಲು ಕೂಧೋ…
ಬೆಟಗೇರಿ ಗ್ರಾಮದ ಭಕ್ತರಿಂದ ಸವದತ್ತಿ ದೇವಸ್ಥಾನಕ್ಕೆ ಪಾದಯಾತ್ರೆಯ ಪ್ರಯಾಣ
ಬೆಟಗೇರಿ:ಗ್ರಾಮದ ಸವದತ್ತಿ ಯಲ್ಲಮ್ಮ ದೇವಿ ನೂರಾರು ಜನ ಭಕ್ತರು ಎತ್ತಿನ ಗಾಡಿ(ಚಕ್ಕಡಿ) ಹೊಡಿಕೊಂಡು ಪಾದಯಾತ್ರೆ ಮೂಲಕ ಸವದತ್ತಿಯ ದೇವಸ್ಥಾನದ ಯಲ್ಲಮ್ಮ ದೇವಿ ದರ್ಶನಕ್ಕಾಗಿ ತೆರಳುವ ಕಾರ್ಯಕ್ರಮ ಫೆ.20ರಂದು ಸಡಗರದಿಂದ ನಡೆಯಿತು.
ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡಾ ಊರಿನ ಹಲವು ಕುಟುಂಬಗಳು ಚಕ್ಕಡಿ, ಎತ್ತುಗಳನ್ನು ಶೃಂಗರಿಸಿ, ಯಲ್ಲಮ್ಮ ದೇವಿ ಕೃರ್ತ ಗದ್ಗುಗೆಯನ್ನು ಇಲ್ಲಿಯ ಯಲ್ಲಮ್ಮ ದೇವಿಯ ಅರ್ಚಕರ, ಆರಾಧಕ ಮಹಿಳೆಯರು ತಲೆಯ ಮೇಲೆ ಶ್ರೀದೇವಿಯ ಜಗಹೊತ್ತು ಊಧೋ..ಊಧೋ..ಊಧೋ.. ಯಲ್ಲಮ್ಮ ನಿನ್ನ ಹಾಲು ಕೂಧೋ… ಎನ್ನುತ್ತಾ ಸಕಲ ವಾದ್ಯ ಮೇಳಗಳೊಂದಿಗೆ ಶ್ರೀದೇವಿಯ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಪ್ರಯಾಣ ಬೆಳಸಿದರು.
ಫೆ.20ರಂದು ಬೆಟಗೇರಿ ಗ್ರಾಮದಿಂದ ಹೊರಟು ಫೆ.21ರಂದು ಸಂಜೆ ಹೊತ್ತಿಗೆ ಸವದತ್ತಿ ಏಳುಕೊಳ್ಳದ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತಲುಪಿ, ಫೆ.22ರಂದು ಶ್ರೀ ಯಲ್ಲಮ್ಮದೇವಿಯ ಪೂಜೆ, ಉಡಿ ತುಂಬುವ, ಶ್ರೀದೇವಿಯ ಆರಾಧಕರಿಂದ ಹಡಲಗಿ ತುಂಬುವ, ನೈವೇದ್ಯ ಸಮರ್ಪಿಸುವ ಹಾಗೂ ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆದು, ಸವದತ್ತಿ ದೇವಸ್ಥಾನದಿಂದ ಫೆ.23ರಂದು ಹೊರಟು, ಫೆ.24ರಂದು ಬೆಟಗೇರಿ ಗ್ರಾಮಕ್ಕೆ ಮರಳಿ ಬರಲಾಗುವುದು ಎಂದು ಗ್ರಾಮದ ಪಾದಯಾತ್ರಿಕರು ತಿಳಿಸಿದರು.
ಸ್ಥಳೀಯ ಹಿರಿಯರಾದ ಮುದಕಪ್ಪ ರಾಮಗೇರಿ, ಲಕ್ಷ್ಮಣ ಚಿನ್ನನ್ನವರ, ಬಸಪ್ಪ ಮುರಗೋಡ, ರಾಮಣ್ಣ ಚಿನ್ನನ್ನವರ, ದುಂಡಪ್ಪ ಹಾಲನ್ನವರ, ಮುತ್ತೆಪ್ಪ ಮಾಕಾಳಿ, ಬಸಪ್ಪ ದಂಡಿನ ನೇತೃತ್ವದಲ್ಲಿ ಮಹಿಳೆಯರು, ಮಕ್ಕಳು, ಪುರುಷರು, 11 ಎತ್ತಿನ ಚಕ್ಕಡಿ, ಟ್ಯಾಕ್ಟರ್, ಟಂ ಟಂ., ದ್ವಿಚಕ್ರ ವಾಹನಗಳು ಸೇರಿದಂತೆ ನೂರಾರು ಜನ ಇಲ್ಲಿಯ ಭಕ್ತರು ಪಾದ ಯಾತ್ರೆ ಮೂಲಕ ಯಲ್ಲಮ್ಮದೇವಿ ದರ್ಶನಕ್ಕಾಗಿ ಪ್ರಯಾಣ ಮಾಡಿದರು.