ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನಕ್ಕೆ ಪ್ರಾಮುಖ್ಯತೆಯಿದೆ: ರಮೇಶ ಅಳಗುಂಡಿ
*ಬೆಟಗೇರಿ ಪ್ರೌಢ ಶಾಲೆಯಲ್ಲಿ ಅಟಲ್ ಟಿಂಕ್‍ರಿಂಗ್ ಲ್ಯಾಬ್ ಉದ್ಘಾಟನೆ *
ಗಣ್ಯರಿಗೆ ಸತ್ಕಾರ
ಬೆಟಗೇರಿ:ರಷ್ಯಾದಲ್ಲಿ ಶಾಲಾ ಮಕ್ಕಳಿಗೆ ನೀಡುವ ತಂತ್ರಜ್ಞಾನದ ಪ್ರಾಯೋಗಿಕ ಕಲಿಕೆಯನ್ನು ನಮ್ಮ ದೇಶದ ಮಕ್ಕಳಿಗೂ ಕಲ್ಪಿಸುವುದು ಪ್ರಧಾನಿ ಮೋದಿ ಅವರ ಕನಸಾಗಿತ್ತು. ರಾಷ್ಟ್ರದ ಅರ್ಹ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಅಟಲ್ ಟಿಂಕ್‍ರಿಂಗ್ ಲ್ಯಾಬ್‍ಗಳನ್ನು ತೆರೆದು ಪ್ರೌಢ ಶಾಲೆಯ ಹಂತದಲ್ಲಿಯೇ ಮಕ್ಕಳಿಗೆ ತಂತ್ರಜ್ಞಾನ ಅಧ್ಯಯನದ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಸ್ಥಳೀಯ ಪ್ರೌಢ ಶಾಲೆ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲ್ಲಿ ಫೆ.25ರಂದು ನಡೆದ ಸುಮಾರು 12 ಲಕ್ಷ ರೂ.ಗಳ ಅನುದಾನದಡಿಯಲ್ಲಿ ನಿರ್ಮಿಸಿದ ನೂತನ ಅಟಲ್ ಟಿಂಕ್‍ರಿಂಗ್ ಲ್ಯಾಬ್ ಹಾಗೂ ಶಾಲಾ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆಯಿದೆ ಎಂದರು.
ನ್ಯಾಯವಾದಿ ಎಂ.ಐ.ನೀಲಣ್ಣವರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಲ್ಲಿಯ ಪ್ರೌಢ ಶಾಲೆ ಮಕ್ಕಳಿಗೆ ತಂತ್ರಜ್ಞಾನ ಕಲಿಕೆಯ ಭಾಗ್ಯ ದೊರೆತಿದೆ. ಶಾಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸ್ಥಳೀಯರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯ, ಸಹಕಾರದಿಂದ ಇಲ್ಲಿಯ ಪ್ರೌಢ ಶಾಲೆ ಸಮಗ್ರ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.
ಬೆಳಗಾವಿ ರೋಬೋ ಸ್ಟೇಮ್ ಕಂಪನಿ ನಿರಂಜನ ದೇಸಾಯಿ, ಸ್ಥಳೀಯ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಬಸವರರಾಜ ಪಣದಿ ಮಾತನಾಡಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪಣ್ಣ ಕುರಬೇಟ ಅವರು ನೂತನ ಅಟಲ್ ಟಿಂಕ್‍ರಿಂಗ್ ಲ್ಯಾಬ್ ಹಾಗೂ ಶಾಲಾ ಕೊಠಡಿ ಉದ್ಘಾಟಿಸಿದರು.
ಈರಯ್ಯ ಹಿರೇಮಠ ಸಾನಿಧ್ಯ, ಎಸ್‍ಡಿಎಂಸಿ ಅಧ್ಯಕ್ಷ ಕುತುಬು ಮಿರ್ಜಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಜ್ಯೋತಿ ಬೆಳಗಿಸಿದರು. ಅತಿಥಿ, ಗಣ್ಯರನ್ನು ಶಾಲೆಯ ವತಿಯಿಂದ ಶಾಲು ಹೊದಿಸಿ ಸತ್ಕರಿಸಲಾಯಿತು.
ಶ್ರೀಶೈಲ ಗಾಣಗಿ, ಶಿವಾಜಿ ನೀಲಣ್ಣವರ, ಶಿವನಪ್ಪ ಮಾಳೇದ, ಈರಣ್ಣ ಬಳಿಗಾರ, ಚಂದ್ರಶೇಖರ ನೀಲಣ್ಣವರ, ಬಸವರಾಜ ದೇಯಣ್ಣವರ, ವಿಠಲ ಕೋಣಿ, ರಮೇಶ ದಳವಾಯಿ, ವೀರಸಂಗಪ್ಪ ದೇಯಣ್ಣವರ, ರಾಮಣ್ಣ ನೀಲಣ್ಣವರ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಶಾಲೆಯ ಶಿಕ್ಷಕರು, ಎಸ್‍ಡಿಎಮ್‍ಸಿ ಸದಸ್ಯರು, ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.