ಮದುವೆಗೆ ತಪ್ಪದೇ ಬನ್ನೀ, ಆಧಾರ್ ನೋಂದಣಿ ತಪ್ಪದೇ ಮಾಡಿಸಿ
ವರದಿ: ಅಡಿವೇಶ ಮುಧೋಳ.
ಬೆಟಗೇರಿ: ದೇಶದ್ಯಾಂತ ಎಲ್ಲಾ ದಾಖಲೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಆಧಾರ್ ಕಾರ್ಡ್‍ನ್ನು ನಿತ್ಯ ಹತ್ತು ಹಲವಾರು ಸೌಲಭ್ಯಗಳಿಗೆ ಬಳಸುತ್ತಾರೆ. ಆದರೆ… ಇಲ್ಲೊಂದು ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್ ಮಾದರಿಯಲ್ಲಿ ಮುದ್ರಣ ಮಾಡಿಸಿದ ಕುರಿತು ಭಾರಿ ವೈರಲ್ ಆಗಿದೆ.
ಯುಡಿಐ ಆಯೋಗ ಆಧಾರ್ ನೋಂದಣಿ ಕುರಿತು ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಆಧಾರ್ ನೋಂದಣಿ ಮಾಡಿಸುವ ಕುರಿತು ಬೆಳಗಾವಿ ಜಿಲ್ಲೆಯ ಜೋಡಿ ತಮ್ಮ ಮದುವೆ ಮೂಲಕ ಜಾಗೃತಿ ಮೂಡಿಸಿದೆ.ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್‍ನಂತೆ ವಿನ್ಯಾಸಗೊಳಿಸಿ ಪ್ರಕಟಿಸಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಗರನಾಳ ಗ್ರಾಮದಲ್ಲಿ ಇದೇ ಏ.21ರಂದು ಮಠದ & ಹಿರೇಮಠ ಬಂಧುಗಳ ಮದುವೆ ಸಮಾರಂಭ ನಡೆಯಲಿದೆ. ಬಗರನಾಳ ಗ್ರಾಮದ ಮಠದ ಸಹೋದರರಿಬ್ಬರು ಈಶ್ವರಯ್ಯ-ಕಾವೇರಿ, ಬಸಯ್ಯ-ಪವಿತ್ರಾ ಎಂಬ ಜೋಡಿಗಳು ಹಸೆಮಣೆ ಏರಲಿದ್ದಾರೆ.
ತಮ್ಮ ವಿವಾಹ ಆಮಂತ್ರಣ ಪತ್ರಿಕೆಯ ಮೂಲಕ ಆಧಾರ್ ಕಾರ್ಡ್ ಮಾಡಿಸಲು ಎಲ್ಲರೂ ಮುಂದಾಗುವಂತೆ ತಿಳಿಸುವ ಪ್ರಯತ್ನ ಮಾಡಿ, ವಿಭಿನ್ನವಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ಬಂಧು ಬಾಂದವರಿಗೆ, ಮಿತ್ರರಿಗೆ ನೀಡುತ್ತಿದ್ದೇವೆ ಎಂದು ನವ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿರುವ ಮದುಮಗ ಬಸಯ್ಯ ಮಠದ ಅವರು ಹೇಳುತ್ತಾರೆ.
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿದೇ! : ಆಧಾರ್ ಕಾರ್ಡ್ ಮಾದರಿ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಭಾರತ ಸರ್ಕಾರದ ಹೆಸರಿನ ಬದಲಿಗೆ ‘ಮದುವೆಯ ಮಮತೆಯ ಕರೆಯೋಲೆ’, ಆಧಾರ್ ಕಾಡ್ ನಂಬರ ಜಾಗದಲ್ಲಿ ಮೊಬೈಲ್ ನಂಬರ್ ಎಂದು ಬರೆಯಲಾಗಿದೆ. ಆಧಾರ್ ನೋಂದಣಿದಾರರ ಹೆಸರು ಬರುವ ಸ್ಥಳದಲ್ಲಿ ನವ ದಂಪತಿಗಳ ಹೆಸರು ಹಾಕಿ ಚಿ. ಬಸಯ್ಯ ಜೊತೆ ಚಿ.ಕು.ಸೌ. ಪವಿತ್ರಾ ಹಾಗೂ ಚಿ.ಈಶ್ವರಯ್ಯ ಜೊತೆ ಚಿ.ಕು.ಸೌ. ಕಾವೇರಿ ಎಂದು ಮುದ್ರಿಸಲಾಗಿದೆ. ಜನ್ಮ ದಿನಾಂಕ ಬದಲಿಗೆ ಮದುವೆ ತಾರೀಖು 21.04.2022 ಜೊತೆಗೆ ಅಕ್ಷತಾರೋಪಣ ಸಮಯ ಮಧ್ಯಾಹ್ನ 12:28 ಎಂದು ನಮೂದಿಸಿದ ಬಳಿಕ ಮದುವೆ ನಡೆಯುವ ಸ್ಥಳ, ಕುಟುಂಬದ ಹೆಸರು, ತಮ್ಮ ಆಗಮನಾಭಿಲಾಷಿಗಳು ಎಂದು ಪ್ರಕಟಿಸಿ ವಿವಾಹ ಆಮಂತ್ರಣ ಪತ್ರಿಕೆ ಮೂಲಕ ಆಧಾರ್ ಕಾರ್ಡ್ ಮಾಡಿಸುವಂತೆ ಈ ಜೋಡಿಗಳಿಬ್ಬರೂ ಕರೆ ನೀಡಿ ಎಲ್ಲರೂ ಮಾದರಿಯಾಗಿದ್ದಾರೆ. ಅಲ್ಲದೇ ಆಧಾರ್ ಕಾರ್ಡ್‍ದಿಂದ ಆಗುವ ವಿವಿಧ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ.
“ತಪ್ಪದೇ ಮದುವೆಗೆ ಬನ್ನೀ, ಮರೆಯದೆ ಆಧಾರ್ ನೋಂದಣಿ ಮಾಡಿಸಿ” ಎಂದು ಬರೆದು ವಿವಾಹ ಆಮಂತ್ರಣ ನೀಡುತ್ತಿರುವ ಈ ಜೋಡಿಗಳಿಗೆ ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.