ಸತತ ಪ್ರಯತ್ನದಿಂದ ಏನೇಲ್ಲಾ ಯಶಸ್ಸು ಸಾಧ್ಯ: ರಮೇಶ ಅಳಗುಂಡಿ
ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು ಎಂದು ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜೂನ್.6ರಂದು ನಡೆದ ಪ್ರತಿಭಾ ಪುರಸ್ಕಾರ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಧನೆ ಸಾಧಕನ ಸ್ವತ್ತು ಹೊರತು ಸೋಮಾರಿಯ ಸ್ವತ್ತಲ್ಲಾ, ಸತತ ಪ್ರಯತ್ನದಿಂದ ಏನೇಲ್ಲಾ ಯಶಸ್ಸು ಸಾಧ್ಯ ಎಂದರು.
ಶಾಲೆಯ ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಶ್ರೀಶೈಲ ಗಾಣಗಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶ್ವ ಪರಿಸರ ದಿನಾಚರಣೆ ಕುರಿತು ವಿದ್ಯಾರ್ಥಿಗಳಿಂದ ಭಾಷಣ ಜರುಗಿತು. ಅತಿ ಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕ ಪ್ರಕಾಶ ಕುರಬೇಟ ಅವರು ಶಾಲಾ ಬ್ಯಾಗಗಳನ್ನು ಕಾಣಿಕೆಯಾಗಿ ನೀಡಿದರು.
ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್, ರಾಮಣ್ಣ ಬಳಿಗಾರ, ವಿಠಲ ಕೋಣಿ, ಗಣ್ಯರು, ಶಿಕ್ಷಣಪ್ರೇಮಿಗಳು, ಶಾಲೆಯ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಸೇರಿದಂತೆ ಸ್ಥಳೀಯರು, ಇತರರು ಇದ್ದರು.