ಭಾರತದ ಕ್ಷಾತ್ರತೇಜತೆಯ ಪರಂಪರೆ ಪುನರುತ್ಥಾನಗೊಳ್ಳುತ್ತಿದೆ: ಸತೀಶ ಕಡಾಡಿ
ಬೆಟಗೇರಿ:ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ದೇಶದ ಸಂಸ್ಕøತಿ ಹಾಗೂ ಕ್ಷಾತ್ರತೇಜತೆಯ ಪರಂಪರೆ ಪುನರುತ್ಥಾನಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಧೈರ್ಯಶಾಲಿ ಮತ್ತು ನಿಷ್ಕಲ್ಮಶ ವ್ಯಕ್ತಿತ್ವ ದೇಶದ ಯುವ ಜನತೆಯನ್ನು ದೇಶಕ್ಕಾಗಿ ದುಡಿಯುವಂತೆ ಪ್ರೇರಣೆ ನೀಡುತ್ತಿದೆ ಎಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲೆ ರೈತ ಮೋರ್ಚಾ ಹಾಗೂ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ಯುವಕ ಮಂಡಳಿಯವರ ಸಂಯುಕ್ತಾಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸ್ಥಳೀಯ ಸದ್ಗುರು ಯಲ್ಲಾಲಿಂಗ ಮಠದ ಆವರಣದಲ್ಲಿ ಇತ್ತೀಚೆಗೆ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ನಮ್ಮ ದೇಶದ ಇತಿಹಾಸದಲ್ಲಿ ಪ್ರಧಾನ ಮಂತ್ರಿಗಳ ಜನ್ನದಿನವನ್ನು ವಿವಿಧ ರೀತಿಯ ಸೇವಾ ಚಟುವಟಿಕೆಗಳಿಂದ ಆಚರಣೆ ಮಾಡುವಂತಹ ನೂತನ ಪರಿಪಾಠವನ್ನು ಬೆಳೆಸುವುದರ ಮೂಲಕ ದೇಶದ ಜನರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವುದು ಹಾಗೂ ಯುವಜನತೆಯಲ್ಲಿ ದೇಶದ ಸಂಸ್ಕøತಿ ಪರಂಪರೆಯ ಬಗ್ಗೆ ಅಭಿಮಾನ ಮೂಡುವ ರೀತಿಯಲ್ಲಿ ಸೇವಾ ಪಾಕ್ಷಿಕದ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದರಲ್ಲದೇ ಕಬಡ್ಡಿ ಆಡುವುದರಿಂದ ಯುವಕರಲ್ಲಿ ದೈಹಿಕ ಬಲ ಮತ್ತು ಮಾನಸಿಕ ಬಲ ಹೆಚ್ಚುತ್ತದೆ. ಅಲ್ಲದೇ ದೇಶಿ ಕ್ರೀಡೆಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡುವ ಮೂಲಕ ದೇಶಿಯ ಕ್ರೀಡೆಗಳನ್ನು ಬೆಳೆಸಬೇಕಾದ ಅವಶ್ಯಕತೆ ಇದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅರಬಾಂವಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ, ಈರಣ್ಣ ದೇಯಣ್ಣವರ, ಈಶ್ವರ ಮುಧೋಳ, ಈರಣ್ಣ ಬಳಿಗಾರ, ಬಸವರಾಜ ಪಣದಿ, ರಾಮಣ್ಣ ಮುಧೋಳ, ಕಲ್ಲೋಳಿ ಶ್ರೀ ಮಹಾಲಕ್ಷೀ ಸೌಹಾರ್ದ ಸಹಕಾರಿಯ ಸ್ಥಳೀಯ ಶಾಖೆಯ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ, ಗ್ರಾಮ ಪಂಚಾಯತ ಮಾಜಿ ಮತ್ತು ಹಾಲಿ ಅಧ್ಯಕ್ಷರು, ಸದಸ್ಯರು, ಯಂಗ್ ಸ್ಟಾರ್ ಕಬಡ್ಡಿ ತಂಡದ ಸದಸ್ಯರು, ಸ್ಥಳೀಯ ಕಬಡ್ಡಿ ಪಂದ್ಯಾವಳಿ ಆಯೋಜಕರು, ಯುವಕರು ಇತರರಿದ್ದರು.