ಮೂಡಲಗಿ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಶನಿವಾರ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಯೋಗ ದಿನಾಚರಣೆಯ ಕರಪತ್ರವನ್ನು ಬಿಡುಗಡೆ ಮಾಡಿದರು.
ಮೂಡಲಗಿ: ‘ಜೂನ್ 21ರಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿರುವ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಅಚ್ಚುಕಟ್ಟಾಗಿ ನಡೆಯುವಂತೆ ತಾಲ್ಲೂಕಿನ ಎಲ್ಲ ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು’ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಮೂಡಲಗಿಯ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂಘಟನೆ ಕುರಿತಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕುರಿತಾದ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ನವದೆಹಲಿಯ ಕೇಂದ್ರ ಆಯುಷ ಇಲಾಖೆ, ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆ, ಬೆಳಗಾವಿ ಜಿಲ್ಲಾ ಆಯುಷ ಇಲಾಖೆ, ಮೂಡಲಗಿ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಯೋಗ ದಿನಾಚರಣೆಯನ್ನು ಬೃಹತ್‍ವಾಗಿ ಆಯೋಜಿಸಲಾಗಿದ್ದು, ಬೆಳಿಗ್ಗೆ 6.30ಕ್ಕೆ ಎಲ್ಲರೂ ಮೈದಾನದಲ್ಲಿ ಹಾಜರ ಇರುವಂತೆ ಕ್ರಮ ಜರುಗಿಸಬೇಕು ಎಂದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಲ್ಲರ ಸಹಭಾಗಿತ್ವ ಮುಖ್ಯವಾಗಿದೆ ಅದಕ್ಕಾಗಿ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟ ಮತ್ತು ಪಟ್ಟಣದ ಎಲ್ಲ ಸಂಘ, ಸಂಸ್ಥೆಗಳಲ್ಲಿ ಪ್ರಚಾರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ದಿನಾಚರನೆಯ ದಿನದಂದು ಯೋಗಾಭ್ಯಾಸದಲ್ಲಿ ತೊಡಗಿಸಬೇಕು ಎನ್ನುವುದು ಈ ಕಾರ್ಯಕ್ರಮದ ಮುಖ್ಯ ಉದ್ಧೇಶವಾಗಿದೆ. ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಮಾಡಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕು ಎಂದರು.
ಯೋಗ ದಿನಾಚರಣೆ ಆಚರಿಸುವ ಕ್ರೀಡಾ ಮೈದಾನದ ಸ್ವಚ್ಛತೆ, ವೇದಿಕೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಅಂಬ್ಯುಲನ್ಸ್‍ದೊಂದಿಗೆ ಪ್ರಥಮೋಪಚಾರ ವ್ಯವಸ್ಥೆ, ಲಘು ಉಪಹಾರ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ನೀಡಿದರು.
ತಹಶೀಲ್ದಾರ್ ಶಿವಾನಂದ ಬಬಲಿ, ತಾಲ್ಲೂಕು ಪಂಚಾಯಿತಿ ಇಒ ಎಫ್.ಎಸ್. ಚಿನ್ನನವರ, ಜಿಲ್ಲಾ ಆಯುಷ ಉಪನಿರ್ದೇಶಕ ಡಾ. ಶ್ರೀಕಾಂತ ಸುಣಧೋಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಎಂ.ಎಸ್. ಕೊಪ್ಪದ, ಸಿಡಿಪಿಒ ಯಲ್ಲಪ್ಪ ಗದಾಡಿ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಲೋಕೋಪಯೋಗಿ ಸಹಾರ್ಯಕ ನಿರ್ದೇಶಕ ಆರ್.ಪಿ. ಅವತಾಡೆ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಮಲಬಣ್ಣವರ, ಹೆಸ್ಕಾಂ ಅಧಿಕಾರಿ ನಾಗನ್ನವರ, ಪಿಎಸ್‍ಐ ರಾಜು ಪೂಜಾರ, ಕಲ್ಲೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಿದಾನಂದ ಮುಗಳಖೋಡ, ಪ್ರಕಾಶ ಮಾದರ, ಮಲ್ಲಪ್ಪ ಮದಗುಣಕಿ, ಶ್ರೀಶೈಲ್ ಪೂಜೇರಿ, ಈರಪ್ಪ ಢವಳೇಶ್ವರ, ಕುಮಾರ ಗಿರಡ್ಡಿ, ಈಶ್ವರ ಮುರಗೋಡ, ಮಲ್ಲಪ್ಪ ನೇವiಗೌಡರ, ಸದಾಶಿವ ನೇರ್ಲಿ, ಗುರು ಗಂಗಣ್ಣವರ, ಪರಪ್ಪ ಗಿರೆಣ್ಣವರ ಇದ್ದರು.
ಜಾಗೃತಿಗಾಗಿ ಜಾಥಾ: 11ನೇ ಅಂರರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜೂನ್ 20ರಂದು ಬೆಳಿಗ್ಗೆ 10ಕ್ಕೆ ಮೂಡಲಗಿ ಪಟ್ಟಣದಲ್ಲಿ ಶಾಲಾ ಮಕ್ಕಳು, ವಿವಿಧ ಸಂಘ, ಸಂಸ್ಥೆಗಳೊಂದಿಗೆ ಜಾಥಾ ಮಾಡಲು ನಿರ್ಧರಿಸಿದರು.