ಮೌನಕ್ಕೆ ಮಹಾನ್ ಶಕ್ತಿ ಇದೆ: ಫಕೀರದಿಂಗಾಲೇಶ್ವರ ಸ್ವಾಮಿಜಿ
ಬೆಟಗೇರಿ: ಶ್ರೀದೇವಿಯು ಶಕ್ತಿ ದೇವತೆÉಯಾಗಿದ್ದಾಳೆ. ಮೌನದಲ್ಲಿರುವ ಆನಂದ, ಶಾಂತಿ, ನೆಮ್ಮದಿ ಮತ್ತೊಂದರಲ್ಲಿ ಸಿಗುವುದಿಲ್ಲಾ, ಮೌನ ಅನಂತ ಭಾಷೆಗಳ ಆಗರವಾಗಿದೆ. ಮೌನಕ್ಕೆ ಮಹಾನ್ ಶಕ್ತಿ ಇದೆ ಎಂದು ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಸಂಸ್ಥಾನಮಠದ ನೂತನ ಉತ್ತರಾಧಿಕಾರಿ ಫಕೀರದಿಂಗಾಲೇಶ್ವರ ಸ್ವಾಮಿಜಿ ಹೇಳಿದರು.
ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ನವರಾತ್ರಿಯ ಅಂಗವಾಗಿ ಅ.9ರಂದು ನಡೆದ ಶ್ರೀದೇವಿ ಪುರಾಣ ಪ್ರವಚನ ಮಂಗಲೋತ್ಸವ, 286ನೇ ಬಸವ ಸ್ಮøತಿ ಮಾಸಿಕ ಶಿವಾನುಭವ ಹಾಗೂ ಶಿರಹಟ್ಟಿ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಎಲ್ಲ ದೇಶಕಾಲಗಳಲ್ಲಿ ನಡೆಯುವ ಏಕೈಕ ಭಾಷೆ ಮೌನವಾಗಿದೆ ಎಂದರು.
ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮೋಹ, ಮಮಕಾರಗಳನ್ನು ಕಳೆದುಕೊಂಡ ವ್ಯಕ್ತಿ ನಿಜವಾಗಿಯೂ ಜೀವನ ಮುಕ್ತ. ಮಮದಾಪೂರದ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಅವರು ನಿಜವಾಗಿಯೂ ನಿರಾಭಾರಿ ಶಿವಯೋಗಿಯಾಗಿದ್ದಾರೆ ಎಂದು ಮೌನಮಲ್ಲಿಕಾರ್ಜುನ ಸ್ವಾಮಿಜಿ ಜೋತೆ ಭಕ್ತರ ಭಕ್ತಿ, ಅವಿನಾಭಾವ ಸಂಬಂಧದ ಕುರಿತು ಈ ವೇಳೆ ಶ್ಲಾಘಿಸಿದರು.
ಮಮದಾಪೂರದ ಮೌನಮಲ್ಲಿಕಾರ್ಜುನ ಶಿವಯೋಗಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೆ ಆಗಮಿತ ಹರ, ಗುರು, ಚರಮೂರ್ತಿಗಳನ್ನು, ದಾನಿಗಳನ್ನು, ಗಣ್ಯರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು. ಮಮದಾಪೂರದ ಚಿದಾನಂದ ಪಟಾತ, ಜಗದಾಳದ ಉದಯ ಪತ್ತಾರ, ಪಟಗುಂದಿಯ ಭರತ ಚಿನ್ನಾಕಟ್ಟಿ ಅವರಿಂದ ಸಂಗೀತ ಸೇವೆ, ಕುಮಾರಿ ಲಕ್ಷ್ಮೀ ಒಡೆಯರ ಹಾಗೂ ಸಂಗಡಿಗರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ಕರಡಿಗುದ್ದಿಯ ವಿರುಪಾಕ್ಷ ರಾಚಣ್ಣವರ ಅನ್ನ ದಾಸೋಹ ಸೇವೆ ನೆರವೇರಿಸಿದರು.
ಶ್ರೀದೇವಿ ಪುರಾಣ ಪ್ರವಚನ ಮಂಗಲೋತ್ಸವ ಪ್ರಯುಕ್ತ ಅ.9ರಂದು ಸಾಯಂಕಾಲ 4 ಗಂಟೆಗೆ ಮಮದಾಪೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರಿಂದ ಆರತಿ, ಕುಂಭ, ಜಾನಪದ ವಿವಿಧ ಕಲಾತಂಡ ಹಾಗೂ ಸಕಲ ವಾಧ್ಯಮೇಳಗಳೊಂದಿಗೆ ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವದಿಂದ ಜರುಗಿತು.
ಶ್ರೀಮಠದ ಭಕ್ತರಾದ ಜಿ.ಜಿ.ಮುರ್ತೇಲಿ, ಶಿವದೇವ ಶರಣರು, ಸದಾಶಿವ ತಲಬಟ್ಟಿ, ಬನಹಟ್ಟಿ ಶ್ರೀಗಳು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ-ಗುರು, ಚರಮೂರ್ತಿಗಳು, ಸಂತ-ಶರಣರು, ಆಧ್ಯಾತ್ಮ ಪ್ರವೀಣರು, ಗಣ್ಯರು. ಶ್ರೀದೇವಿ ಪುರಾಣ ಪ್ರವಚನ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಶ್ರೀಮಠದ ಭಕ್ತರು ಇದ್ದರು. ಶ್ರೀದೇವಿಯ ಪುರಾಣ ಪ್ರವಚನ ಆಯೋಜಕ ಸಮಿತಿ ಸಂಚಾಲಕ ಮಂಜುನಾಥ ಶರಣರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲ ಶರಣರು ಕೊನೆಗೆ ವಂದಿಸಿದರು.