ನ.1ರಂದು ಬೆಟಗೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಬೆಟಗೇರಿ:ಗ್ರಾಮದಲ್ಲಿ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಸಮಾರಂಭ ನ.1 ರಂದು ಜರುಗಲಿದೆ.
ಅಂದು ಮುಂಜಾನೆ 8 ಗಂಟೆಗೆ ಗ್ರಾಮದ ವಿವಿಧ ವೃತ್ತದಲ್ಲಿರುವ ಪುತ್ಥಳಿಗಳಿಗೆ ಪೂಜೆ, ಪುಷ್ಪಾರ್ಪಣೆ ಸಮರ್ಪಣೆ ಬಳಿಕ ಇಲ್ಲಿಯ ಅಶ್ವಾರೂಢ ಬಸವೇಶ್ವರ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ವಿವಿಧ ರೂಪಕಗಳ, ಜಾನಪದ ಕಲಾ ತಂಡಗಳು ಸೇರಿದಂತೆ ಸಕಲ ವಾದ್ಯಮೇಳಗಳೊಂದಿಗೆ ಭುವನೇಶ್ವರಿ ದೇವಿಯ ಮತ್ತು ಡಾ.ಬೆಟಗೇರಿ ಕೃಷ್ಣಶರ್ಮರ ಭಾವಚಿತ್ರದ ಭವ್ಯ ಮೇರವಣಿಗೆ ನಡೆಯಲಿದೆ.
ಸ್ಥಳೀಯ ಕನ್ನಡ ಪರ ಹೋರಾಟಗಾರರು, ಸಾಹಿತಿ-ಶರಣರು, ಗಣ್ಯರು, ಗ್ರಾಪಂ ಹಾಗೂ ವಿವಿಧ ಸಂಘ, ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಯುವಕರು, ಕರವೇ ಪದಾಧಿಕಾರಿಗಳು, ಸದಸ್ಯರು, ಕನ್ನಡ ರಾಜ್ಯೋತ್ಸವ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.