ಮೂಡಲಿಗಿ: ಮನುಕುಲದ ಉಳುವಿಗೆ ಸ್ವಚ್ಚ ಪರಿಸರ ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಮೂಡಲಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಪುರಸಭೆ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಚೇತನ ಯುವಕ ಮತ್ತು ಕ್ರೀಡಾ ಸಂಘದ ಇವುಗಳ ಆಶ್ರಯದಲ್ಲಿ ಸ್ವಚ್ಛತಾ ಜಾಗೃತಿ ಹಾಗೂ ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಸ್ವಚ್ಛ ಭಾರತ ಪೋಸ್ಟರ್ಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ನಾವು ನಮ್ಮ ನಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರೂ ಪಣತೊಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೂಡಲಿಗಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೊಣಿ ಮಾತನಾಡಿ ನಾವು ಪ್ರತಿಯೊಬ್ಬರೂ ಮೊದಲು ನಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಸುಂದರ ಜೀವನ ನಡೆಸಬೇಕು ಎಂದು ಹೇಳಿದರು.
ಮೂಡಲಗಿ ಪುರಸಭೆ ಆರೋಗ್ಯ ಹಿರಿಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ, ನೈಸರ್ಗಿಕ ಪರಿಸರವನ್ನು ನಿರ್ಮಿಸೋಣ ಹಾಗೂ ಹಸಿ ಕಸ ಒಣ ಕಸ ವಿಂಗಡನೆ ಮಾಡಿ ಸಂಗ್ರಹಿಸಿ ವ್ಯವಸ್ಥಿತ ಸ್ಥಳದಲ್ಲಿ ಅದನ್ನು ಹಾಕಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯವನ್ನು ಮಾಡಿದರೆ ಸುಂದರ ಸಮಾಜ ನಿರ್ಮಾಣ ಮಾಡಲಿಕ್ಕೆ ಅನುಕೂಲವಾಗುತ್ತದೆ ಯುವಕರಿಗೆ ಕರೆ ನೀಡಿದರು. ಮೂಡಲಿಗಿ ತಾಲೂಕ ಸರಕಾರಿ ನೌಕರರ ಸಂಘದ ನಿರ್ದೇಶಕ ಶಿವಲಿಂಗಪ್ಪ ಪಾಟೀಲ ಮಾತನಾಡಿ ಮೊದಲು ನಾವು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸ್ವಚ್ಛವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಕಿರಿಯ ನಿರೀಕ್ಷಕ ಪ್ರಥಮ್ ಭೂವಿ, ಕರುನಾಡು ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಸವಿತಾ ತುಕ್ಕನ್ನವರ, ಚೇತನ ಯುವಕ ಸಂಘದ ಅಧ್ಯಕ್ಷ ಜಗದೀಶ ಡೊಳ್ಳಿ, ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಸಿದ್ದಪ್ಪ ಹೊಸಮನಿ, ವಿಠ್ಠಲ ಪಾಟೀಲ, ಚೇತನ ನಿಶಾನಿಮಠ, ನಿಂಗಪ್ಪ ಹೊಸೂರ, ರಾಜು ಶಾಬಣ್ಣವರ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ್ಕಿ ಶಾಂಭವಿ ದೇವ್ರುಷಿ ಸ್ವಾಗತಿಸಿ ವಂದಿಸಿದರು.