ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲಾ ರೈತರು ನನ್ನ ಬೆಳೆ, ನನ್ನ ಹಕ್ಕು ಅಭಿಯಾನದಡಿಯಲ್ಲಿ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯೋಜನೆ ಅನ್ವಯ 2021-22ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಲು ಸರ್ಕಾರ ಆದೇಶಿಸಿದ್ದು, ರೈತರು ತಮ್ಮ ಜಮೀನುಗಳ ಸರ್ವೆ ನಂ., ಹಿಸ್ಸಾ ನಂಬರ್‍ವಾರು ನೀವು ಬೆಳೆದ ಕೃಷಿ, ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಮುಂಗಾರು ಬೆಳೆ ಸಮೀಕ್ಷೆಯನ್ನು ಸ್ವತ: ನೀವೇ ಕೈಗೊಳ್ಳಬೇಕೆಂದು ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಮತ್ತು ಗೋಕಾಕ ತಾಲೂಕಿನ ಕಂದಾಯ ಹಾಗೂ ಕೃಷಿ ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದ ಸೂಚನೆಯಂತೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಸಹಾಯಧನ ನೀಡಲು ವರದಿ ತಯಾರಿಸಲು ಬೆಳೆ ವಿಮೆ ಯೋಜನೆಯಡಿ ರೈತರ ತಾಕುವಾರು ಬೆಳೆ ಪರೀಕ್ಷಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿಗಳ ಆಧಾರಿತ ಅನುಷ್ಠಾನುಗಳಿಗೆ ಆರ್‍ಟಿಸಿಯಲ್ಲಿ ಬೆಳೆ ವಿವರ ದಾಖಲಾತಿ ಮಾಡುವುದು ಇದರ ಉದ್ದೇಶವಾಗಿದೆ.
ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಸಂದರ್ಭದಲ್ಲಿ ರೈತರು ತಮ್ಮ ಜಮೀನು ಪಹಣಿಪತ್ರಿಕೆ(ಉತಾರ)ಗಳಲ್ಲಿ ಆಧಾರ್ ಕಾರ್ಡ ಕಡ್ಡಾಯವಾಗಿ ನಮೂದಿಸಬೇಕು. ಈ ಮೊಬೈಲ್ ಆ್ಯಪ್ ಮೂಲಕ ರೈತರು ತಮ್ಮ ಮುಂಗಾರು ಬೆಳೆ ಸಮೀಕ್ಷೆ ಮಾಡಬೇಕು. ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಮಾಡುವುದರಿಂದ ಸರ್ಕಾರದಿಂದ ದೂರಕುವ ವಿವಿಧ ಸಹಾಯ ಸೌಲಭ್ಯಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ಸ್ಥಳೀಯ ಗ್ರಾಮಲೆಕ್ಕಾಧಿಕಾರಿ ಕಾರ್ಯಾಲಯಕ್ಕೆ ಸಂಪರ್ಕಿಸಬೇಕು ಎಂದು ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
