ಅದ್ಧೂರಿಯಾಗಿ ನಡೆದ ಬೆಟಗೇರಿ ಗ್ರಾಮದ ಹನುಮಂತ ದೇವರ ಕಡೆ ಓಕುಳಿ
ಬೆಟಗೇರಿ:ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಮೇ.29ರಂದು ವಿಜೃಂಭನೆಯಿಂದ ನಡೆಯಿತು. ಮುಂಜಾನೆ 7 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ, ಹರಕೆ ಸಮರ್ಪಣೆ ನಡೆದ ಬಳಿಕ ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡಕ್ಕೆ ಸ್ಥಳೀಯ ವಿವಿಧ ದೇವರ ಪಲ್ಲಕ್ಕಿ ಪ್ರದಕ್ಷೀಣೆ ನಂತರ ಕಡೆ ಓಕಳಿ ನಡೆಯಿತು.
ಸಂಜೆ 5 ಗಂಟೆಗೆ ಕುದುರೆ, ನವಿಲು, ಗರುಡ, ಕರಡಿ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳ ಸೋಗಿನ ಮಜಲು(ಗುಂಪು)ಗಳ ಯುವಕರು ಕಾಲಿಗೆ ಮರಗಾಲು ಕಟ್ಟಿಕೊಂಡು ವಾಧ್ಯಮೇಳಗಳ ತಾಳಕ್ಕೆ ತಕ್ಕಂತೆ ಕುಣಿಯುವ ಕುಣಿತ ನೋಡುಗರ ಕಣ್ಮನ ತಣಿಸಿತು. ಬಣ್ಣದೊಕುಳಿ ಬಳಿಕ ಮಕ್ಕಳು, ಯುವಕರು, ವೃದ್ಧರು ಸಹ ಉತ್ಸಾಹದಿಂದ ಕಡೆ ಓಕುಳಿಯಲ್ಲಿ ನೀರು ಎರಚಿ ಸಂಭ್ರಮಿಸಿದರು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಮಹಿಳೆಯರು, ಮಕ್ಕಳು, ವೃದ್ಧರು ಸಹಿತ ಸುಮಾರು ಮೂರ್ನಾಲ್ಕು ಗಂಟೆಗಳವರೆಗೆ ಒಂಟೆಗಾಲಲ್ಲಿ ನಿಂತುಕೊಂಡು ಓಕುಳಿಯ ಸೋಬಗನ್ನು ಸವಿದರು.
ಬೆಟಗೇರಿ ಗ್ರಾಮದ ಕೆಲವು ಬೀದಿಗಳು ಹಸಿರು ತಳಿರು ತೋರಣ, ವಿದ್ಯುತ್ ದೀಪ್‍ಗಳಿಂದ ಅಲಂಕಾರಗೊಂಡು ಕಂಗೊಳಿಸಿದವು. ಪ್ರತಿ ಓಣಿಯ ಎಲ್ಲ ಮನೆಯವರು ಸಾಮೂಹಿಕವಾಗಿ ಬಾಜಾ-ಭಜಂತ್ರಿಗಳ ಸಕಲ ವಾಧ್ಯಮೇಳಗಳೊಂದಿಗೆ ಇಲ್ಲಿಯ ಮಾರುತಿ ದೇವರ ದೇವಾಲಯಕ್ಕೆ ತೆರಳಿ ನೈವೇದ್ಯ, ಪೂಜೆ, ಪುನಸ್ಕಾರ, ಹರಕೆ ಸಮರ್ಪಿಸಿದರು.
ಕಡೆ ಓಕುಳಿ ದಿನ ಸ್ಥಳೀಯ ಪ್ರತಿ ಮನೆಗಳಲ್ಲಿ ನಾನಾ ಬಗೆಯ ಮೃಷ್ಟಾನ್ನ ಭೋಜನ ತಯಾರಿಸಿ, ಅಕ್ಕ-ಪಕ್ಕದ ಮನೆಯವರು, ಬಂಧು, ಬಾಂದವರು, ಆಪ್ತ ಮಿತ್ರರು ಒಟ್ಟಿಗೆ ಕುಳಿತು ಊಟ ಮಾಡುವುದು, ಊಣಬಡಿಸುವ ಸಡಗರದ ಸಂಭ್ರಮ ಸರ್ವಧರ್ಮಿಯರಲ್ಲಿ ಮತ್ತಷ್ಟು ಅವಿನಾಭಾವದ ಸಂಬಂಧ ಬೆಸೆದಂತತ್ತಿತ್ತು. ಮಾರುತಿ ದೇವರ ದೇವಾಲಯದ ಮುಂದೆ ರಾತ್ರಿ ಹಾರಿಸುವ ಸಿಡಿ ಮದ್ದುಗಳ ರಂಗು ರಂಗಿನ ಚಿತ್ತಾರ ಬಾನಂಗಳದಲ್ಲಿ ನೋಡುಗರ ಕಣ್ಮನ ತಣಿಸುತು. ವರ್ಷಕ್ಕೂಮ್ಮೆ ನಡೆಯುವ ಇಲ್ಲಿಯ ಹನುಮಂತ ದೇವರ ಓಕುಳಿ ನಿಮಿತ್ಯ ಗ್ರಾಮದ ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ ತುಂಬಿತ್ತು. ಕಡೆ ಓಕುಳಿ ದಿನ ಓಕುಳಿ ಸೋಬಗು ನೋಡಲು ಅಪಾರ ಜನ ಸೇರಿದ್ದರು.