ಸ್ಥಳೀಯರು ನೀಡುವ ಸಹಕಾರ ಮೆಚ್ಚುವಂತದ್ದಾಗಿದೆ:ಬಸವಂತ ಕೋಣಿ
ಬೆಟಗೇರಿ: ಜಗನ್ಮಾತೆ ಶ್ರೀ ದುರ್ಗಾದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ. ಬೆಟಗೇರಿ ಗ್ರಾಮಸ್ಥರು ದೇವರ ಮೇಲೆವಿಟ್ಟಿರುವ ಭಯ, ಭಕ್ತಿ ಮೆಚ್ಚುವಂತದ್ದಾಗಿದೆ ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.11ರಂದು ನಡೆದ ಸ್ಥಳೀಯ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿ ಮಾತನಾಡಿ, ಸ್ಥಳೀಯ ಜನರು ಧಾರ್ಮಿಕ ಕಾರ್ಯಗಳಿಗೆ ನೀಡುವ ತನು, ಮನ, ಧನ ಸಹಾಯ, ಸಹಕಾರ ಶ್ಲಾಘನೀಯವಾಗಿದೆ ಎಂದರು.
ನ.10ರಂದು ಬ್ರಾಹ್ಮೀ ಮೂಹೂರ್ತದಲ್ಲಿ ದುರ್ಗಾದೇವಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮದ ಬಳಿಕ ಸಾಯಂಕಾಲ 5 ಗಂಟೆಗೆ ಪುರದೇವರುಗಳ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು ನಂತರ ಎಲ್ಲ ದೇವರುಗಳಿಗೆ ಉಡಿ ತುಂಬುವ ಕಾರ್ಯಕ್ರಮ ಸಡಗರದಿಂದ ಜರುಗಿತು. ನ.11ರಂದು ಬೆಳಗ್ಗೆ 6 ಗಂಟೆಗೆ ದುರ್ಗಾದೇವಿ ದೇವರ ಗದ್ದುಗೆಗೆ ಪೂಜೆ, ಪುನಸ್ಕಾರದ ಬಳಿಕ ಹಾಲಲ್ಲಿ ಮತ್ತು ಓಪನ್ ಟಗರಿನ ಕಾಳಗ ಸ್ಫರ್ಧೆ ಜರುಗಿ ವಿಜೇತರಾದವರಿಗೆ ಬಹುಮಾನ ವಿತರಣೆ, ಅನ್ನಸಂತರ್ಪನೆ ನಡೆದು ಪ್ರಸಕ್ತ ವರ್ಷದ ಶ್ರೀದೇವಿಯ ಜಾತ್ರಾ ಮಹೋತ್ಸವ ಸಮಾರೂಪಗೊಂಡಿತು.
ಸ್ಥಳೀಯ ದುರ್ಗಾದೇವಿ ಕಮೀಟಿ ಅಧ್ಯಕ್ಷ ಮಾಯಪ್ಪ ಬಾಣಸಿ, ಸುಭಾಸ ಕರೆಣ್ಣವರ, ಸದಾಶಿವ ಕುರಿ, ನಿಂಗಪ್ಪ ಕೋಣಿ, ಹನುಮಂತ ವಗ್ಗರ, ರಾಮಪ್ಪ ನೀಲಣ್ಣವರ, ಭೀರಪ್ಪ ಕುರಬೇಟ, ಭಾಗಪ್ಪ ಬ್ಯಾಗಿ, ಮಲ್ಲಪ್ಪ ಕನೋಜಿ, ಸ್ಥಳೀಯ ರಾಜಕೀಯ ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಸ್ಥಳೀಯ ದುರ್ಗಾದೇವಿ ಕಮೀಟಿ ಪದಾಧಿಕಾರಗಳು, ಸದಸ್ಯರು, ಗ್ರಾಮಸ್ಥರು, ಶ್ರೀದೇವಿ ಭಕ್ತರು ಇದ್ದರು.