ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಹನುಮಂತ ದೇವರ ಕಡೆ ಓಕುಳಿ ಜೂ.9ರಂದು ನಡೆಯಲಿದೆ ತನ್ನನಿಮಿತ್ತ ಈ ಲೇಖನ.
*ಅಡಿವೇಶ ಮುಧೋಳ. ಬೆಟಗೇರಿ
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಓಕುಳಿಗೆ ಶತ ಶತಮಾನಗಳ ಐತಿಹಾಸಿಕ ಇತಿಹಾಸವಿದೆ. ಪ್ರತಿ ವರ್ಷಕ್ಕೊಮ್ಮೆ ಜರುಗುವ ಭಕ್ತರ ಇಷ್ಟಾರ್ಥ ಪೂರೈಸುವ ಇಲ್ಲಿಯ ಹನುಮಂತ ದೇವರ ಓಕುಳಿ ಸರ್ವ ಧರ್ಮ ಸಮನ್ವಯದ ಪ್ರತೀಕವಾಗಿದೆ. ಈ ಗ್ರಾಮದ ದೊಡ್ಡ ಜಾತ್ರಾ ಮಹೋತ್ಸವ ಇದಾಗಿದೆ. ಓಕುಳಿ ಬಂತು ಅಂದರೆ ಸ್ಥಳೀಯ ಜನರ ಸಂಭ್ರಮ ಹೇಳತೀರದು.! ಜೂ.9ರಂದು ಕಡೆ ಓಕುಳಿ ವಿವಿಧ ಕಾರ್ಯಕ್ರಮಗಳು ಅಧ್ಧೂರಿಯಾಗಿ ನಡೆಯಲಿವೆ.
ಜೂ.9ರಂದು ಕಡೆ ಓಕುಳಿ ದಿನ ಸಂಜೆ 5 ಗಂಟೆಗೆ ಕುದುರೆ, ನವಿಲು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳ ಸೋಗಿನ ನಾಲ್ಕೈದು ಮಜಲು(ಗುಂಪು)ಗಳ ಯುವಕರು ಕಾಲಿಗೆ ಮರಗಾಲು ಕಟ್ಟಿಕೊಂಡು ವಾಧ್ಯಮೇಳಗಳ ತಾಳಕ್ಕೆ ತಕ್ಕಂತೆ ಕುಣಿಯುವ ಕುಣಿತ ನೋಡುಗರ ಕಣ್ಮನ ತಣಿಸುತ್ತದೆ. ಸುಮಾರು ಹತ್ತುಹದಿನೈದು ಸಾವಿರಕ್ಕೂ ಹೆಚ್ಚು ಜನ ಓಕುಳಿ ನೋಡಲು ಸೇರುತ್ತಾರೆ. ಬಣ್ಣದೊಕುಳಿ ಬಳಿಕ ಓಕುಳಿಯಲ್ಲಿ ಮಕ್ಕಳು, ಯುವಕರು, ವೃದ್ಧರು ಸಹ ನೀರು ಎರುಚುತ್ತಾರೆ. ಮಹಿಳೆಯರು, ಮಕ್ಕಳು, ವೃದ್ಧರು ಸಹಿತ ಅಸಂಖ್ಯಾತ ಜನರು ಸೇರಿ ಸುಮಾರು ಮೂರ್ನಾಲ್ಕು ಗಂಟೆಗಳವರೆಗೆ ಒಂಟೆಗಾಲಲ್ಲಿ ನಿಂತುಕೊಂಡು ಓಕುಳಿಯ ಸೋಬಗನ್ನು ಸವಿಯುತ್ತಾರೆ.
ಓಕುಳಿ ನಿಮಿತ್ಯ ಗ್ರಾಮದ ಕೆಲವು ಓಣಿ ಬೀದಿಗಳು ಹಸಿರು ತಳಿರು ತೋರಣ, ವಿದ್ಯುತ್ ದೀಪ್‍ಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತವೆ. ಪ್ರತಿ ಓಣಿಯ ಎಲ್ಲ ಮನೆಯವರು ಸಾಮೂಹಿಕವಾಗಿ ಬಾಜಾ-ಭಜಂತ್ರಿಗಳ ಸಕಲ ವಾಧ್ಯಮೇಳಗಳೊಂದಿಗೆ ಇಲ್ಲಿಯ ಮಾರುತಿ ದೇವರ ದೇವಾಲಯಕ್ಕೆ ತೆರಳಿ ನೈವೇದ್ಯ, ಪೂಜೆ, ಪುನಸ್ಕಾರ, ಹರಕೆ ಸಮರ್ಪಿಸುವದು ವಾಡಿಕೆ.
ಬೆಟಗೇರಿಗೆ ಬೀಗತಾನ : ಬೆಟಗೇರಿ ಹನುಮಂತ ದೇವರ ಓಕುಳಿಯ ಸಡಗರ ಸಂಭ್ರಮ ನೋಡುವ ಸಲುವಾಗಿಯೇ ಈ ಹಿಂದೆ ನಾಡಿನ ಹಲವು ಜಿಲ್ಲೆಯ ಹಳ್ಳಿಗಳ ಹಲವು ಕುಟುಂಬಗಳು ಬೆಟಗೇರಿ ಊರಿಗೆ ಬೀಗತನ ಮಾಡಿದ ಉದಾಹರಣೆಗಳಿವೆ. ಬೆಟಗೇರಿ ಓಕುಳಿ ಮತ್ತು ಹೊಸ ಬೀಗತಾನ ಬೆಸುಗೆಯ ವೈಶಿಷ್ಟೆತೆ ಕುರಿತು ಸ್ಥಳೀಯ ಹಿರಿಯ ನಾಗರಿಕರು ಹೇಳುವ ಮಾತಿದು.
ಹೋಳಿಗೆ ಊಟ: ಗ್ರಾಮದ ಪ್ರತಿ ಮನೆಯಲ್ಲಿ ಓಕುಳಿ ಪ್ರಯುಕ್ತ ಮನೆಯ ಹೆಣ್ಣು ಮಕ್ಕಳನ್ನು ತಪ್ಪದೇ ತವರಿಗೆ ಕರೆತರುವುದು, ಬೀಗ-ಬಿಜ್ಜರ, ಬಂಧು, ಬಾಂಧವರ ಸಮಾಗಮದ ಸಂಗಮವಾಗುತ್ತದೆ. ಎಲ್ಲರ ಮನೆ-ಮನೆಗಳಲ್ಲಿ ಓಕುಳಿಯ ಸಡಗರ ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಕಡೆ ಓಕುಳಿ ದಿನ ಸ್ಥಳೀಯ ಪ್ರತಿ ಮನೆಗಳಲ್ಲಿ ನಾನಾ ಬಗೆಯ ಮೃಷ್ಟಾನ್ನ ಭೋಜನ ತಯಾರಿಸಿ, ಅಕ್ಕ-ಪಕ್ಕದ ಮನೆಯವರು, ಬಂಧು, ಬಾಂದವರು, ಆಪ್ತ ಮಿತ್ರರು ಒಟ್ಟಿಗೆ ಕುಳಿತು ಊಟ ಮಾಡುವುದು, ಊಣಬಡಿಸುವ ಸಡಗರ ಹೇಳತಿರದು.
ಓಕುಳಿ ಪ್ರಯುಕ್ತ ರಂಗಭೂಮಿ ಕಲೆಯ ನಾಟಕ ಸೇರಿದಂತೆ ಮನರಂಜನೆಯ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ. ಸ್ಟೇಶನರಿ ಅಂಗಡಿಗಳು, ಹಲವಾರು ಆಟಕೆಗಳ ಛತ್ರಗಳು ಮಕ್ಕಳಿಗೆ ಮನರಂಜನೆಗಾಗಿ ಊರಲ್ಲಿ ಬಂದು ಜಮಾಯಿಸಿರುತ್ತವೆ. ಮಾರುತಿ ದೇವಾಲಯದ ಮುಂದೆ ರಾತ್ರಿ ಹಾರಿಸುವ ಸಿಡಿ ಮದ್ದುಗಳ ರಂಗು ರಂಗಿನ ಚಿತ್ತಾರ ಬಾನಂಗಳದಲ್ಲಿ ನೋಡುಗರ ಕಣ್ಮನ ತಣಿಸುತ್ತದೆ. ಹೀಗಾಗಿ ಹನುಮಂತ ದೇವರ ಓಕುಳಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ತನ್ನದೇ ಆದ ವೈಶಿಷ್ಟಪೂರ್ಣ ಸಡಗರ, ಸಂಭ್ರಮದಿಂದ ಆಚರಿಸಲ್ಪಡುತ್ತದೆ. ನೀವು ಬನ್ನಿ ನಮ್ಮೂರ ಬೆಟಗೇರಿ ಓಕುಳಿ ನೋಡಲು.!
“ ನಮ್ಮೂರ ಹನುಮಂತ ದೇವರ ಓಕುಳಿ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷ ತನ್ನದೇ ಆದ ವೈಶಿಷ್ಟಪೂರ್ಣ ಸಡಗರ, ಸಂಭ್ರಮದಿಂದ ಆಚರಿಸಲ್ಪಡುತ್ತದೆ.
* ಲಕ್ಷ್ಮಣ ಚಂದರಗಿ. ಗ್ರಾಪಂ ಮಾಜಿ ಅಧ್ಯಕ್ಷರು. ಬೆಟಗೇರಿ ತಾ.ಗೋಕಾಕ.
“ಪ್ರತಿ ವರ್ಷಕ್ಕೊಮ್ಮೆ ಜರುಗುವ ಭಕ್ತರ ಇಷ್ಟಾರ್ಥ ಪೂರೈಸುವ ಇಲ್ಲಿಯ ಹನುಮಂತ ದೇವರ ಓಕುಳಿ ಸರ್ವ ಧರ್ಮ ಸಮನ್ವಯದ ಪ್ರತೀಕವಾಗಿದೆ. ಅರ್ಜುನ ದೇಯಣ್ಣವರ.
ಗ್ರಾಪಂ ಮಾಜಿ ಸದಸ್ಯರು ಬೆಟಗೇರಿ, ತಾ.ಗೋಕಾಕ.