ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸ್ವಚ್ಛತೆಗೆ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಬೇಕಾ ಬೀಟಿಯಾಗಿ ಎಸೆಯಬಾರದು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಎಮ್.ಎಲ್.ಯಡ್ರಾಂವಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಸೆ.17ರಂದು ನಡೆದ ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವೆ ಪಾಕ್ಷಿಕ-2025ರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಬೆಟಗೇರಿ ಗ್ರಾಪಂ ವ್ಯಾಪ್ತಿಯ ಗ್ರಾಮದ ಮನೆ, ಅಂಗಡಿ, ಮುಂಗಟ್ಟುದಾರ ಹಾಗೂ ಸ್ಥಳೀಯರು ಹಸಿ ಮತ್ತು ಒಣ ಕಸಗಳನ್ನು ಬೇರೆ ಬೇರೆ ಮಾಡಿ ಕಸ ತುಂಬುವ ವಾಹನ ತಮ್ಮ ಬಳಿ ಬಂದಾಗ ವಾಹನದಲ್ಲಿ ಹಾಕಬೇಕು. ಸ್ಥಳೀಯರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸ್ಥಳೀಯರು ಗ್ರಾಪಂ ಸಹಯೋಗದಲ್ಲಿ ಗ್ರಾಮದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಸಹಕರಿಸಬೇಕೆಂದರು.
ಇಲ್ಲಿಯ ಗ್ರಾಪಂ ವತಿಯಿಂದ ಸ್ಥಳೀಯ ಹಲವು ಸ್ಥಳಗಳಲ್ಲಿ ಕಸ ಹಾಗೂ ತ್ಯಾಜ್ಯ ವಸ್ತುವನ್ನು ಕಸ ತುಂಬುವ ವಾಹನದಲ್ಲಿ ತುಂಬಿ ಕಸ ವಿಲೇವಾರಿ ಸ್ಥಳಕ್ಕೆ ಸಾಗಿಸಲಾಯಿತು. ಗ್ರಾಮದ ವಿವಿಧಡೆ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯರು, ಗ್ರಾಪಂ ಸಿಬ್ಬಂದಿ ಸೇರಿ ಸ್ವಚ್ಛತಾ ಪ್ರತಿಜ್ಞಾವಿಧಿ ಆಚರಿಸಿದರು.
ಇಲ್ಲಿಯ ಗ್ರಾಪಂ ಕಾರ್ಯದರ್ಶಿ ಎಮ್.ಪಿ.ತಳವಾರ, ಕರ ವಸೂಲಿಗಾರ ಸುರೇಶ ಬಾಣಸಿ, ಬಸವರಾಜ ಪಣದಿ, ವಿಠಲ ಚಂದರಗಿ, ಶಿವಾನಂದ ಐದುಡ್ಡಿ, ಈರಣ್ಣ ದಂಡಿನ, ನೇತ್ರಾ ಬಡಿಗೇರ, ಲಕ್ಕಮ್ಮ ಚಂದರಗಿ, ಮೇಳೆಪ್ಪ ಹರಿಜನ, ಸಾಂವಕ್ಕ ಹರಿಜನ, ಬಸವರಾಜ ದೇಯಣ್ಣವರ, ಶಿವಾನಂದ ತೋಟಗಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.