ಬೆಟಗೇರಿ:ಸನ್2020-21ನೇ ಸಾಲಿನ ಗೋಕಾಕ ತಾಲೂಕಾ ಪಂಚಾಯತಿ 15ನೇ ಹಣಕಾಸು ಯೋಜನೆಯಡಿ ಒಟ್ಟು 7.35 ಲಕ್ಷ ರೂ.ಗಳ ಅನುದಾನಡಿಯಲ್ಲಿ ಕೆಮ್ಮನಕೋಲ ತಾಪಂ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಕೆಮ್ಮನಕೋಲ ತಾಪಂ ಸದಸ್ಯೆ ನೀಲವ್ವ ಶಿವಲಿಂಗಪ್ಪ ಬಳಿಗಾರ ಹೇಳಿದರು.
ಕೆಮ್ಮನಕೋಲ ತಾಪಂ ವ್ಯಾಪ್ತಿಯ ಬಿಲಕುಂದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂ.ಗಳ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆಮ್ಮನಕೋಲ ತಾಪಂ ವ್ಯಾಪ್ತಿಯ ಗೋಸಬಾಳ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸುಮಾರು 3.35 ಲಕ್ಷ ರೂ.ಗಳು, ಕೆಮ್ಮನಕೋಲ ಮತ್ತು ನಿಂಗಾಪೂರ ಗ್ರಾಮದಲ್ಲಿ ಪೈಪ್‍ಲೈನ್ ಅಳವಡಿಕೆ ಒಂದೊಂದು ಲಕ್ಷ ರೂ.ಗಳ ವೆಚ್ಚದಲ್ಲಿ ತಾಪಂ ಅನುದಾನದಡಿಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಾಪಂ ಸದಸ್ಯೆ ನೀಲವ್ವ ಬಳಿಗಾರ ತಿಳಿಸಿದರು.
ಬಿಲಕುಂದಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಟಿ.ಕೆ.ಟಕಳಿ ಮಾತನಾಡಿ, ಇಲ್ಲಿಯ ತಾಪಂ ಮತ್ತು ಗ್ರಾಪಂ ಸದಸ್ಯರು ಹಾಗೂ ಸ್ಥಳೀಯರು ಶಾಲೆಯ ಸಮಗ್ರ ಅಭಿವೃದ್ಧಿಗೆ ಸಹಾಯ, ಸಹಕಾರ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಗೋಸಬಾಳ ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಎ.ಸಿ.ಬೂದಿಹಾಳ, ಬಸವರಾಜ ಇಟ್ನಾಳ, ಬಿ.ಜಿ.ನಂದಾ, ಬಿ.ಆರ್.ಕಾಮಣಿ, ಆರ್.ಎಸ್.ಮಗದುಮ್ಮ, ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.