ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶೀಗಿಹುಣ್ಣಿಮೆ ಪ್ರಯುಕ್ತ ರೈತರು ತಮ್ಮ ತಮ್ಮ ಹೊಲ-ಗದ್ದೆಗಳÀಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿತಾಯಿಗೆ ಉಡಿತುಂಬಿ, ಪೂಜಿಸಿ, ಚರಗ ಚಲ್ಲುವ ಕಾರ್ಯಕ್ರಮ ಮಂಗಳವಾರ ಅ.7 ರಂದು ಸಡಗರದಿಂದ ನಡೆಯಿತು.
ಬೆಟಗೇರಿ ಗ್ರಾಮದ ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿತ್ತು, ಇಲ್ಲಿಯ ರೈತ ಕುಟುಂಬದ ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಎತ್ತುಗಳನ್ನು ಶೃಂಗರಿಸಿ, ಎತ್ತಿನ ಬಂಡಿ ಹೂಡಿಕೊಂಡು, ಕೆಲವರು ಕಾಲ್ನಡೆಗೆಯಲ್ಲಿ, ಇನ್ನೂ ಕೆಲವರು ದ್ವಿಚಕ್ರ ವಾಹನಗಳಲ್ಲಿ ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಹೋಗಿ ಶೀಗಿ ಹುಣ್ಣಿಮೆಯ ಚರಗ ಚೆಲ್ಲುವ ಹಬ್ಬ ಸಡಗರದಿಂದ ಆಚರಿಸಿದರು.
ಹೊಲ-ಗದ್ದೆಗಳಲ್ಲಿ ಮನೆಯಿಂದ ಒಯ್ದ ಅಡುಗೆ ಬಿಚ್ಚಿಟ್ಟು ಹೊಲದಲ್ಲಿರುವ ಐದು ಜೋಳದ ದಂಟು, ಚಿಕ್ಕದಾದ(ಪಂಚ ಪಾಂಡವರು)ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ಹೊಲ-ಗದ್ದೆಯ ತುಂಬೆಲ್ಲಾ ನೈವೇದ್ಯ ರೂಪದಲ್ಲಿರುವ ಮೃಷ್ಟಾನ್ನ ಎಡೆಯನ್ನು ಚರಗ ಚಲ್ಲುವ ಮೂಲಕ ಭೂತಾಯಿಗೆ ನಮನ ಸಮರ್ಪಿಸಿದ ಬಳಿಕ ಮನೆಮಂದಿ ಹಾಗೂ ಅಕ್ಕ-ಪಕ್ಕದ ಮನೆಯವರು ಸೇರಿಕೊಂಡು ಒಟ್ಟಿಗೆ ಕುಳಿತು ಭೋಜನ ಸವಿದು ಸಂಭ್ರಮಿಸಿದ ನಂತರ ಪ್ರಸಕ್ತ ವರ್ಷದ ಮಳೆ, ಬೆಳೆಗಳ ಕುರಿತು ಚರ್ಚಿಸುತ್ತಾ ತಮ್ಮ ಮನೆಗಳತ್ತ ಮರಳಿದರು.
ಶೀಗಿಹುಣ್ಣಿಮೆ ದಿನದಂದು ಮುಧೋಳ ಕುಟುಂಬದ ಸದಸ್ಯರು ತಮ್ಮ ತೋಟದಲ್ಲಿ ಭೂ ತಾಯಿಗೆ ನಮನ ಸಲ್ಲಿಸಿ, ತೋಟದಲ್ಲಿ ಚರಗ ಚಲ್ಲಿ ಬಳಿಕ ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಭೋಜನ ಸವಿಯುತ್ತಿರುವುದು. ಈ ವೇಳೆ ಅಡಿವೇಶ ಮುಧೋಳ, ಶೋಭಾ ಮುಧೋಳ, ಸುನೀತಾ ಮುಧೋಳ, ಸುಚೀತ ಮುಧೋಳ, ಪ್ರಮೋದ ಮುಧೋಳ, ಸಿದ್ದಪ್ಪ ಮುಧೋಳ ಮತ್ತೀತರರು ಇದ್ದರು.