ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಸಂಪನ್ನ
ಬೆಟಗೇರಿ:ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪಲ್ಲಕ್ಕಿ ಉತ್ಸವ ಮಂಗಳವಾರ ಡಿ.21 ರಂದು ವಿಜೃಂಭನೆಯಿಂದ ನಡೆದವು.
ಮುಂಜಾನೆ 10.30 ಗಂಟೆಗೆ ಇಲ್ಲಿಯ ದ್ಯಾಮವ್ವದೇವಿ ದೇವರ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಶೃಂಗಾರಗೊಳಿಸುವ, ಉಡಿತುಂಬುವದು, ಪುರದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು ಸಡಗರದಿಂದ ನಡೆಯಿತು.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯದಲ್ಲಿ ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಿ, ಪುರಜನರಿಂದ ಪೂಜೆ, ನೈವೇದ್ಯ ಸಮರ್ಪಿಸುವದು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾಪ್ರಸಾದ ಸಂಭ್ರಮದಿಂದ ಜರುಗಿದ ಬಳಿಕ ಶ್ರೀದೇವಿಯ ಪ್ರಸಕ್ತ ವರ್ಷದ ದೀಪೋತ್ಸವ, ಕಾರ್ತಿಕೋತ್ಸವ ಸಂಪನ್ನಗೊಂಡಿತು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಗ್ರಾಮ ಪಂಚಾಯತಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಹಿರಿಯ ನಾಗರಿಕರು, ಸಂತ ಶರಣರು, ಇಲ್ಲಿಯ ಶ್ರೀದೇವಿ ದೇವಾಲಯದ ಮತ್ತು ವಿವಿಧ ದೇವರ ದೇವಾಲಯಗಳ ಅರ್ಚಕರು, ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಸದಸ್ಯರು, ಭಕ್ತರು, ಸ್ಥಳೀಯರು ಇದ್ದರು.