Breaking News
Home / Recent Posts / ಗೋದಾವರಿ ಸಕ್ಕರೆ ಕಾರ್ಖಾನೆಯ ಸಡಗರದ ಸುವರ್ಣ ಸಂಭ್ರಮ ! ಜನಸಾಗರದ ಮಧ್ಯೆ ಮಾಲೀಕರಿಗೆ ಅಭಿಮಾನ ಸನ್ಮಾನಗಳ ಸುರಿಮಳೆ !

ಗೋದಾವರಿ ಸಕ್ಕರೆ ಕಾರ್ಖಾನೆಯ ಸಡಗರದ ಸುವರ್ಣ ಸಂಭ್ರಮ ! ಜನಸಾಗರದ ಮಧ್ಯೆ ಮಾಲೀಕರಿಗೆ ಅಭಿಮಾನ ಸನ್ಮಾನಗಳ ಸುರಿಮಳೆ !

Spread the love

ಗೋದಾವರಿ ಸಕ್ಕರೆ ಕಾರ್ಖಾನೆಯ ಸಡಗರದ ಸುವರ್ಣ ಸಂಭ್ರಮ !

ಜನಸಾಗರದ ಮಧ್ಯೆ ಮಾಲೀಕರಿಗೆ ಅಭಿಮಾನ ಸನ್ಮಾನಗಳ ಸುರಿಮಳೆ !

ಮೂಡಲಗಿ: ಸಮೀಪದ ಸೈದಾಪೂರ- ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ರೈತ, ಕಾರ್ಮಿಕ, ಅಧಿಕಾರಿ ವರ್ಗದಿಂದ ಭಾನುವಾರ ಅದ್ದೂರಿ ಸುವರ್ಣ ಮಹೋತ್ಸವ ಜರುಗಿತು.
ರೈತ, ಕಾರ್ಮಿಕರ ನಾಡಿ ಮಿಡಿತ ಅರಿತು 5 ದಶಕಗಳ ಕಾಲ ಈ ಭಾಗದಲ್ಲಿ ಉತ್ಪನ್ನ, ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಸಮೃದ್ದಿಗೆ ಕಾರಣರಾದ ಮಿಲ್ ಮಾಲೀಕರ ಪರಿವಾರಕ್ಕೆ ಬೃಹತ್ ವೇದಿಕೆಯಲ್ಲಿ ಜನಸಾಗರದ ಮಧ್ಯೆ ಅಭಿಮಾನ ಮತ್ತು ಸನ್ಮಾನಗಳ ಸುರಿಮಳೆಯಾಯಿತು.
ಇದಕ್ಕೂ ಮುನ್ನ ಕಾರ್ಖಾನೆ ಮಾಲೀಕ ಸಮೀರಭಾಯಿ ಸೋಮೈಯಾ ಮತ್ತು ಪತ್ನಿ ಅಮೃತಾಮಯಿ ಹಾಗೂ ಮಕ್ಕಳಾದ ಮಾಧವ, ಮೀರಾ ಪರಿವಾರ ಬೆಳಗ್ಗೆ ಶಿವಲಿಂಗೇಶ್ವರ, ರಾಘವೇಂದ್ರ, ಮಾರುತಿ ದೇವಸ್ಥಾನ ಹಾಗೂ ಮಾಧವಾನಂದ ಆಶ್ರಮಕ್ಕೆ ತೆರಳಿ ದೇವರ ದರ್ಶನ ಪಡೆದು ದೇವಸ್ಥಾನದ ಟ್ರಸ್ಟ್ ವತಿಯಿಂದ ಸನ್ಮಾನ ಸ್ವೀಕರಿಸಿದರು.
ನಂತರ ಮುಧೋಳ-ನಿಪ್ಪಾಣಿ ಹೆದ್ದಾರಿಯಿಂದ ಕಾರ್ಖಾನೆಯ ಪರೇಡ್ ಮೈದಾನದ ಬೃಹತ್ ವೇದಿಕೆವರೆಗೆ 1 ಕಿಮೀ ದೂರದವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ಅಮೃತಾಮಯಿ ಮತ್ತು ಸಮೀರಭಾಯಿ ದಂಪತಿಯನ್ನು ಕುದುರೆ ಸಾರೋಟ್‍ದಲ್ಲಿ ಹಾಗೂ ಅವರ ಮಕ್ಕಳನ್ನು ಆನೆ ಮೇಲೆ ಕೂಡ್ರಿಸಿ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು.

ವೇದಿಕೆ ಕಾರ್ಯಕ್ರಮವನ್ನು ಸಮೀರ ಸೋಮೈಯಾ ಹಾಗೂ ಅತಿಥಿಗಳು ಉದ್ಘಾಟಿಸಿದರು. ಗೋದಾವರಿ ಬಯೋ ರಿಫೈನರೀಜ್ ಕಂಪನಿ ನಡೆದು ಬಂದ ದಾರಿ ಬಗ್ಗೆ ಕಿರುಚಿತ್ರ ಪ್ರದರ್ಶಿಸಲಾಯಿತು. ಕಾರ್ಖಾನೆ ಸಂಸ್ಥಾಪಕ ಕರಮಶಿಭಾಯಿ ಸೋಮೈಯಾ ಅವರ ಜೀವನಗಾಥೆಯ ಕನ್ನಡ ಅವತರಣಿಕೆ ಬಿಡುಗಡೆ ಮಾಡಲಾಯಿತು.
ಕಾರ್ಖಾನೆ ಮಾಲೀಕರ ಪರಿವಾರವನ್ನು ಕಬ್ಬು ಬೆಳೆಗಾರರ ಸಂಘ, ಕಾರ್ಮಿಕರ ಸಂಘ, ಸುತ್ತಲಿನ ನಾನಾ ಕಾರ್ಖಾನೆ ಮಾಲೀಕರು, ನಾನಾ ಸಂಘಟನೆ ಹಾಗೂ ಶಾಸಕರು ಸೇರಿದಂತೆ ಹಲವು ಗಣ್ಯರು ಸಾಮೂಹಿಕವಾಗಿ, ವೈಯಕ್ತಿಕವಾಗಿ ಸನ್ಮಾನಿಸಿದರು. ರೈತ, ಕಾರ್ಮಿಕ, ಅಧಿಕಾರಿಗಳ ಆದರ ಮತ್ತು ಅಭಿಮಾನ ಕಂಡ ಮಾಲೀಕರ ಪರಿವಾರದವರು ಪುಳಕಿತರಾದರು.

ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ, ಮಜದೂರ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜಾರ, ಡಿಸ್ಟಿಲರಿ ಘಟಕದ ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ ಭದ್ರಶೆಟ್ಟಿ, ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ ಮಾತನಾಡಿದರು. ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದ ಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಮಹಿಳೆ, ಮಕ್ಕಳು ಸೇರಿದಂತೆ ಅಂದಾಜು 25 ಸಾವಿರ ಜನ ಸೇರಿದ್ದರು. ಎಲ್ಲರಿಗೂ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಹಾಲುಗ್ಗಿ ಅನ್ನಸಾರು ಭೋಜನ ವ್ಯವಸ್ಥೆ ಮಾಡಲಾಯಿತು. ಕೆ.ಜೆ.ಸೋಮೈಯಾ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ದಿನೇಶ ಶರ್ಮಾ ಸ್ವಾಗತಿಸಿದರು. ವಿಜಯಕುಮಾರ ಕಣವಿ ವಂದಿಸಿದರು. ಎಸ್.ಎಂ.ಹುಕ್ಕೇರಿ ವಂದಿಸಿದರು.

ವಸುಧೈವ ಕುಟುಂಬಕಂ: ಕಾರ್ಖಾನೆಯೇ ಒಂದು ಪರಿವಾರ :

ನಾನು ಒಂಟಿಯಲ್ಲ, ನಿಮ್ಮೊಂದಿಗೆ ಜಂಟಿಯಾಗಿ ಕಾರ್ಖಾನೆ ನಡೆಸುತ್ತಿದ್ದೇನೆ. ಇಲ್ಲಿ ಮಾಲೀಕರು, ಸೇವಕರು ಎಂಬ ಭಾವ ಬೇಡ, ವಸುಧೈವ ಕುಟುಂಬಕಂ ಎಂಬಂತೆ ನಾವೆಲ್ಲರೂ ಒಂದೇ ಪರಿವಾರ. 50 ವರ್ಷಕ್ಕೆ ನೀವು ತೋರಿಸಿದ ಈ ಪ್ರೀತಿ ಇನ್ನೂ 50 ವರ್ಷಹೀಗೇ ಇದ್ದರೆ ಶತಮಾನೋತ್ಸವ ಆಚರಿಸೋಣ. ಶುಗರ್ ಫ್ಯಾಕ್ಟರಿ ಇನ್ನು ಮುಂದೆ ಎನರ್ಜಿ ಫ್ಯಾಕ್ಟರಿ ಆಗಲಿದೆ. ಸಕ್ಕರೆ ಜೊತೆ ಇಥೆನಾಲ್, ಇಲೆಕ್ಟ್ರಿಸಿಟಿ ಸೇರಿದಂತೆ ಎನರ್ಜಿಟಿಕ್ ಉತ್ಪನ್ನಗಳ ವಿಸ್ತರಣೆ ನಡೆಯಲಿದೆ ಎಂದು ಹೇಳಿದ ಸಮೀರ ಸೋಮೈಯಾ ಅವರು ಆರಂಭದಲ್ಲಿ ಕನ್ನಡದಲ್ಲಿ ಪ್ರಯತ್ನಪೂರ್ವಕವಾಗಿ ಮಾತನಾಡಿದ್ದನ್ನು ಕೇಳಿದ ಜನಸಾಗರ ರೋಮಾಂಚನದಿಂದ ಚಪ್ಪಾಳೆ ತಟ್ಟಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ