ಜನೇವರಿ ತಿಂಗಳಲ್ಲಿ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಕೌಜಲಗಿಯಲ್ಲಿ ಜರುಗಿದ ಕೌಜಲಗಿ ಅರ್ಬನ್ ಬ್ಯಾಂಕಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಹೇಳಿಕೆ
ಗೋಕಾಕ : ಕೌಜಲಗಿ ಭಾಗದ ರೈತರ ಜೀವನಾಡಿಯಾಗಿರುವ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಜನೇವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡುವುದಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಶನಿವಾರ ಸಂಜೆ ತಾಲೂಕಿನ ಕೌಜಲಗಿ ಅರ್ಬನ್ ಬ್ಯಾಂಕಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೌಜಲಗಿ ಮತ್ತು ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನೀರು ಹರಿಸುವ ಮೂಲಕ ಈ ಭಾಗವನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿ ಮಾಡುವ ಸಂಕಲ್ಪ ಹೊಂದಿರುವುದಾಗಿ ಅವರು ಹೇಳಿದರು.
ಕಲ್ಮಡ್ಡಿ ಏತ ನೀರಾವರಿ ಯೋಜನೆ ಸಾಕಾರಗೊಳ್ಳಲು ಈ ಭಾಗದ ರೈತರ ಹೋರಾಟವಿದೆ. ಸುಮಾರು ದಶಕಗಳಿಂದ ಕಲ್ಮಡ್ಡಿ ನೀರಾವರಿ ಯೋಜನೆಗೆ ರೈತರ ಪರಿಶ್ರಮದಿಂದ ಈ ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ. ಕೌಜಲಗಿ ಮತ್ತು ಸುತ್ತಲಿನ ಬಿಲಕುಂದಿ, ಮನ್ನಿಕೇರಿ, ಗೋಸಬಾಳ ಮತ್ತು ಬಗರನಾಳ ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲು ಸುಮಾರು 161.20 ಕೋಟಿ ರೂ. ವೆಚ್ಚದಲ್ಲಿ ಕಲ್ಮಡ್ಡಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಸುಮಾರು 5685 ಎಕರೆ ಕ್ಷೇತ್ರ ನೀರಾವರಿಯಾಗಲಿದೆ. ಇದರ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಈಗಾಗಲೇ ಈ ಭಾಗದಲ್ಲಿ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗುತ್ತಿದೆ. ಆದರೆ ಹೊಲಗಾಲುವೆ ಕಾಮಗಾರಿ ಮತ್ತು ಹನಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಜನೇವರಿ ತಿಂಗಳಲ್ಲಿ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ರೈತರಿಗೆ ಸಮರ್ಪಣೆ ಮಾಡುವುದಾಗಿ ಅವರು ಹೇಳಿದರು.
ಈ ಭಾಗದ ಸಾರ್ವಜನಿಕರ ಬಹು ವರ್ಷಗಳ ಬೇಡಿಕೆಯಾಗಿರುವ ಕೌಜಲಗಿ ತಾಲೂಕು ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಹೊಸ ತಾಲೂಕುಗಳು ರಚನೆಯಾಗಿದ್ದರೂ ಕೋವಿಡ್ ಕಾರಣಗಳಿಂದ ಸಮರ್ಪಕ ಅನುದಾನದ ಕೊರತೆಯಾಗುತ್ತಿದೆ. ಕೌಜಲಗಿ ತಾಲೂಕು ರಚಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ. ತಾಲೂಕು ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷಾತೀತವಾಗಿ ಶ್ರಮಿಸೋಣ. ಕೌಜಲಗಿಯಲ್ಲಿ ಗ್ರಂಥಾಲಯ ತೆರೆದು ಓದುಗರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಅರಭಾವಿ ಕ್ಷೇತ್ರದಂತಹ ಜನರನ್ನು ಪಡೆದಿರುವುದು ನನ್ನ ಪುಣ್ಯವಾಗಿದೆ. ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಬ್ಯಾಂಕು ಮುಂದಿನ ದಿನಗಳಲ್ಲಿ ಗ್ರಾಹಕರ ತಕ್ಕಂತೆ ಕಾರ್ಯನಿರ್ವಹಿಸಿ ಹೆಚ್ಚೆಚ್ಚು ಶಾಖೆಗಳು ಆರಂಭವಾಗಲಿ. ಶತಮಾನೋತ್ಸವ ಸಂಭ್ರಮ ಕಾಣಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಆಶಿಸಿದರು.
ಕೌಜಲಗಿ ಅರ್ಬನ್ ಬ್ಯಾಂಕಿಗೆ ನಮ್ಮ ತಂದೆ ದಿ.ವಿಶ್ವನಾಥ ಕತ್ತಿ ಅವರಿಂದ ಆರ್ಥಿಕ ನೆರವು : ಆಹಾರ ಸಚಿವ ಉಮೇಶ ಕತ್ತಿ
ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ಅವರು, ಅರ್ಬನ್ ಬ್ಯಾಂಕು ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ತಮ್ಮ ತಂದೆ ದಿ. ವಿಶ್ವನಾಥ ಕತ್ತಿ ಅವರು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಅರ್ಬನ್ ಬ್ಯಾಂಕುಗಳಿಗೆ ಸಹಾಯ ನೀಡಿದ್ದಾರೆ. ತಮ್ಮದೇಯಾದ ರೀತಿಯಲ್ಲಿ ಧನ ಸಹಾಯ ಮಾಡುವ ಮೂಲಕ ಬ್ಯಾಂಕುಗಳ ಆರ್ಥಿಕ ಪ್ರಗತಿಗೆ ಕಾರಣೀಭೂತರಾಗಿದ್ದರು. ಜಿಲ್ಲೆಯ ಎಲ್ಲ ರೈತರಿಗೂ ಇದರಿಂದ ಅನುಕೂಲವಾಗಿದೆ. ಈ ಭಾಗದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ 2004 ರಿಂದ ಅಭಿವೃದ್ಧಿ ಶಕೆ ಆರಂಭವಾಗಿದೆ. ಕೌಜಲಗಿ ಗ್ರಾಮವೂ ಸಹ ಪ್ರಗತಿಪಥದತ್ತ ಸಾಗುತ್ತಿದೆ. ಜೊತೆಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ರೈತರ ಆರ್ಥಿಕ ಬೆಳವಣಿಗೆಗೆ ಕಾರಣರಾಗಿದ್ದಾರೆಂದು ಸಚಿವ ಕತ್ತಿ ಶ್ಲಾಘನೆ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, 1946 ರಲ್ಲಿ ಸ್ಥಾಪನೆಗೊಂಡ ಅರ್ಬನ್ ಬ್ಯಾಂಕು ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಇದಕ್ಕಾಗಿ ಅನೇಕ ಹಿರಿಯರು ಈ ಬ್ಯಾಂಕು ಸ್ಥಾಪನೆಗೊಳ್ಳಲು ಕಾರಣರಾಗಿದ್ದಾರೆ. ಬ್ಯಾಂಕಿನಿಂದ 4 ಹೊಸ ಶಾಖೆಗಳನ್ನು ಆರಂಭ ಮಾಡುವಂತೆ ಈಗಾಗಲೇ ರಿಜರ್ವ ಬ್ಯಾಂಕಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವ ನಿಮಿತ್ಯ ಪ್ರಕಾಶ ಕೋಟಿನತೋಟ ಸಂಪಾದಕತ್ವದ ಅಮೃತೋತ್ಸವ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಬ್ಯಾಂಕಿನ ಮಾಜಿ ಅಧ್ಯಕ್ಷರುಗಳನ್ನು ಸತ್ಕರಿಸಲಾಯಿತು.
ಅಮೃತ ಮಹೋತ್ಸವ ಸ್ವಾಗತ ಸಮೀತಿ ಅಧ್ಯಕ್ಷ ಮಹಾದೇವಪ್ಪ ಭೋವಿ ಮಾತನಾಡಿ, ಇಂದಿನ ಸಮಾರಂಭದಲ್ಲಿ ಎರಡು ದೊಡ್ಡ ಶಕ್ತಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿವೆ. ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ ಕತ್ತಿ ಅವರು ನಮ್ಮ ಬ್ಯಾಂಕಿಗೆ ಆಧಾರ ಸ್ತಂಭರಾಗಿದ್ದಾರೆ. ಇವರ ನೆರವಿನಿಂದ ಬ್ಯಾಂಕು ಅಭಿವೃದ್ಧಿಯತ್ತ ಸಾಗುತ್ತಿದೆ. ಜೊತೆಗೆ ಸಚಿವ ಉಮೇಶ ಕತ್ತಿ ಅವರ ತಂದೆ ದಿ. ವಿಶ್ವನಾಥ ಕತ್ತಿ ಅವರು 1976 ರಿಂದ ನಮ್ಮ ಬ್ಯಾಂಕಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ನಮ್ಮ ಬ್ಯಾಂಕಿಗೆ ದೊಡ್ಡ ಉಪಕಾರ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ಗ್ರಾಪಂ ಅಧ್ಯಕ್ಷೆ ಪಾರ್ವತಿ ದಳವಾಯಿ, ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಕುಂದರಗಿ, ಬ್ಯಾಂಕಿನ ಉಪಾಧ್ಯಕ್ಷೆ ಗೌರುತಾಯಿ ಭೋವಿ, ನಿರ್ದೇಶಕರಾದ ಶಿವಾನಂದ ಲೋಕನ್ನವರ, ಅಡಿವೆಪ್ಪ ದಳವಾಯಿ, ಈರಣ್ಣಾ ಹುದ್ದಾರ, ಸುಭಾಷ ಕೌಜಲಗಿ, ಶ್ರೀಶೈಲ ಗಾಣಿಗೇರ, ಭೀಮಶಿ ಉದ್ದಪ್ಪನವರ, ಅಶೋಕ ಹೊಸಮನಿ, ಶಿವಲಿಂಗಪ್ಪ ಮರೆನ್ನವರ, ಹಬೀಬ ಮುಲ್ತಾನಿ, ಮಹಾದೇವಿ ಶಿವನಮಾರಿ, ವೃತ್ತಿಪರ ನಿರ್ದೇಶಕರಾದ ಮಲ್ಲಪ್ಪ ನೀಲನ್ನವರ, ಡಾ.ನಾರಾಯಣ ಕೌಜಲಗಿ, ವ್ಯವಸ್ಥಾಪಕ ಪವಾಡೆಪ್ಪ ಗೌಡರ, ಸಿದ್ದಪ್ಪ ಹಳ್ಳೂರ, ಮಹೇಶ ಪಟ್ಟಣಶೆಟ್ಟಿ, ರವೀಂದ್ರ ಪರುಶೆಟ್ಟಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಅಪ್ಪಾಸಾಬ ಅವತಾಡೆ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಮೃತ ಮಹೋತ್ಸವದ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಬ್ಯಾಂಕಿನ ನಿರ್ದೇಶಕ ಅಶೋಕ ಪರುಶೆಟ್ಟಿ ಅವರ ನಿಧನಕ್ಕೆ ಮೌನಾಚರಣೆ ಮಾಡಲಾಯಿತು.