Breaking News
Home / ಬೆಳಗಾವಿ / 4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿದ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿದ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ- ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಎಲ್ಲ ಸಮಾಜಗಳನ್ನು ಒಂದುಗೂಡಿಸಿಕೊಂಡು ಯಾವೊಂದು ಸಮಾಜಕ್ಕೆ ಅನ್ಯಾಯವಾಗದಂತೆ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡುತ್ತಿರುವುದಾಗಿ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಬುಧವಾರದಂದು ತಾಲ್ಲೂಕಿನ ತಳಕಟ್ನಾಳ ಗ್ರಾಮದಲ್ಲಿ ಸುಮಾರು 4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳ ಬೇಧ ಭಾವ ಮಾಡದೇ ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜನೋಪಯೋಗಿ
ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಅವರು ತಿಳಿಸಿದರು.
ತಳಕಟ್ನಾಳ ಗ್ರಾಮದಲ್ಲಿ ಅನೇಕ ಕಾಮಗಾರಿಗಳನ್ನು ನೆರವೇರಿಸಿರುವುದು ನನಗೆ ಅತ್ಯಂತ ಖುಷಿಯಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲೇಬೇಕೆಂದು ಗ್ರಾಮಸ್ಥರು ಹಠ ಹಿಡಿದಿದ್ದರು. ಹೀಗಾಗಿ ಬೆಂಗಳೂರು
ಕಾರ್ಯಕ್ರಮವನ್ನು ರದ್ದುಗೊಳಿಸಿ ತಳಕಟ್ನಾಳ ಗ್ರಾಮದಲ್ಲಿ ಪಾಲ್ಗೊಳ್ಳಬೇಕಾಯಿತು.
ಗ್ರಾಮಸ್ಥರು ನೀಡುತ್ತಿರುವ ಕಾಳಜಿ, ಪ್ರೀತಿ ನೋಡಿ ಮಾತುಗಳೇ ಬರುತ್ತಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಈ ಭಾಗದವರು ತಮ್ಮನ್ನು ಆಶೀರ್ವದಿಸುತ್ತ ಬರುತ್ತಿದ್ದಾರೆ ಎಂದರು.
ಕ್ಷೇತ್ರದಲ್ಲಿ ಹದಿಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇನೆ. ಕೆಲವು ರಸ್ತೆಗಳಿಗೆ ಈಗಾಗಲೇ ಅನುದಾನ ಬಂದಿದೆ. ಉದಗಟ್ಟಿ- ತಳಕಟ್ನಾಳ- ಖಂಡ್ರಟ್ಟಿ ರಸ್ತೆ, ಹಡಗಿನಾಳ ಕ್ರಾಸ್ದಿಂದ ಹಡಗಿನಾಳತನಕ, ಬೀರನಗಡ್ಡಿ ರಸ್ತೆಗಳ ಸುಧಾರಣೆ ಕಾಮಗಾರಿಗಳು ಮಂಜೂರಾಗಿದೆ. ಜತೆಗೆ ರೈತರ ತೋಟಪಟ್ಟಿ ರಸ್ತೆಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ 56 ತೋಟದ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದು, ಇನ್ನೂ 50 ತೋಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕಿದೆ. ನಮ್ಮ ತಾಲ್ಲೂಕಿನಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿರುವುದರಿಂದ ರಸ್ತೆಗಳ ಸುಧಾರಣೆ ಅವಶ್ಯವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಹೆಚ್ಚಿನ ರಸ್ತೆಗಳನ್ನು ಸುಧಾರಣೆ ಮಾಡಲು ಕಾಮಗಾರಿಗಳಿಗೆ ಮಂಜೂರಾತಿ ನೀಡುವಂತೆ ಕೋರಿಕೊಂಡಿದ್ದೇನೆ ಎಂದು ತಿಳಿಸಿದರು.
ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗಬೇಕು. ಈ ದಿಸೆಯಲ್ಲಿ ಸತೀಶ್ ಜಾರಕಿಹೊಳಿಯವರು ನನಗಿಂತ ಮೊದಲು ಕಾಲುವೆಗಳಿಗೆ ಭೇಟಿ ನೀಡುತ್ತ ನಮ್ಮ ರೈತ ಬಾಂಧವರಿಗೆ ನೀರು ತಲುಪಿಸುತ್ತಿದ್ದರು. ಅವರ ನಂತರ ನಾನೂ ಸಹ ಸತೀಶ್ ಅವರ ಹಾದಿಯಲ್ಲಿ ನಡೆಯುತ್ತಿದ್ದೇನೆ. ಕಾಲುವೆ, ಹಳ್ಳಗಳಿಗೆ ನೀರು ಬಿಡಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದೇನೆ. ಇದೇ ಏಪ್ರಿಲ್ 1 ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಿನಾಲ್ ಗಳಿಗೆ ನೀರನ್ನು ಬಿಡುಗಡೆ ಮಾಡುವಂತೆಯೂ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ದೇವರ ದಯೆಯಿಂದ ಮಳೆಯಾದರೆ ರೈತರು ಖುಷಿಯಾಗುತ್ತಾರೆ. ರೈತರು ಸುಖದಿಂದ ಇದ್ದರೆ ಇಡೀ ಜಗವು ಸಂತಸದಿಂದ ಇರುತ್ತದೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಯನ್ನು ಉದ್ಘಾಟಿಸಿದರು.
ನಂತರ ತೆರೆದ ವಾಹನದಲ್ಲಿ ಭಾರೀ
ಮೆರವಣಿಗೆಯೊಂದಿಗೆ ವೇದಿಕೆಗೆ ಶಾಸಕರನ್ನು ಕರೆ ತರಲಾಯಿತು.
ವಿವಿಧ ವಾದ್ಯ ವೃಂದಗಳು, ಆನೆ, ಡೋಲಕ, ಸುಮಂಗಲೆಯರಿಂದ ಕುಂಭ ಮೇಳವು ಆಕರ್ಷಿಯವಾಗಿತ್ತು.
ಗ್ರಾಮದೇವತೆಯ ಜಾತ್ರೆಯು ಸಡಗರ ಸಂಭ್ರಮದಿಂದ ಜರುಗಿತು.


2.50 ಕೋಟಿ ರೂಪಾಯಿ ವೆಚ್ಚದ ಲಕ್ಷ್ಮೀದೇವಿ ನಗಾರೆಖಾನೆ, 60 ಲಕ್ಷ ರೂಪಾಯಿ ವೆಚ್ಚದ ಯಾತ್ರಾ ನಿವಾಸ, 10 ಲಕ್ಷ ರೂಪಾಯಿ ವೆಚ್ಚದ ದುರ್ಗಾದೇವಿ ಅಡಿಗೆ ಕೋಣೆ, 10 ಲಕ್ಷ ರೂಪಾಯಿ ವೆಚ್ಚದ ರೇವಣ ಸಿದ್ಧೇಶ್ವರ ಚಾಂದಣಿ, 10 ಲಕ್ಷ ರೂಪಾಯಿ ವೆಚ್ಚದ ಬಲಭೀಮ ದೇವರ ಚಾಂದಣಿ, 10 ಲಕ್ಷ ರೂಪಾಯಿ ವೆಚ್ಚದ ಬಸವೇಶ್ವರ ರಂಗ ಮಂದಿರದ ಕಟ್ಟಡವನ್ನು ಬಾಲಚಂದ್ರ ಜಾರಕಿಹೊಳಿಯವರು ಉದ್ಘಾಟಿಸಿದರು.
ಹುಲ್ಲಾರ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಒಟ್ಟು ನಾಲ್ಕು ಕೊಠಡಿಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಉದ್ಘಾಟಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕವಲಗುಡ್ಡದ ಅಮರೇಶ್ವರ ಮಹಾರಾಜರು,
ತಳಕಟ್ನಾಳದ ಆತ್ಮಾನಂದ ಸ್ವಾಮಿಗಳು, ಕಪರಟ್ಟಿಯ ಬಸವರಾಜ ಸ್ವಾಮಿಗಳು ವಹಿಸಿದ್ದರು.
ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣ ಮಸಗುಪ್ಪಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಪ್ರಭಾ ಶುಗರ್ಸ್ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಲಕ್ಕಪ್ಪ ಹುಲಕುಂದ, ಮಲ್ಲಿಕಾರ್ಜುನ ಕಬ್ಬೂರ, ಬಿಇಓ ಪ್ರಕಾಶ ಹಿರೇಮಠ, ವಿಠ್ಠಲ ಸವದತ್ತಿ, ಅಶೋಕ ನಾಯಿಕ, ನಿಂಗಪ್ಪ ದೊಡಮನಿ, ರವಿ ಪರುಶೆಟ್ಟಿ, ಹಣಮಂತ ನಾಯಿಕ, ವಿಠ್ಠಲ ಹುಲ್ಲಾರ, ವೀರುಪಾಕ್ಷಿ ಮುಂಗರವಾಡಿ, ವಿವಿಧ ಸಮಾಜಗಳ ಮುಖಂಡರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About inmudalgi

Check Also

ಇಟ್ನಾಳ ಗ್ರಾಮದಲ್ಲಿ ಆರ್‍ಡಿಎಸ್ ಪದವಿ ಮಹಾವಿದ್ಯಾಲಯದಿಂದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

Spread the loveಮೂಡಲಗಿ : ಪಟ್ಟಣದ ಆರ್‍ಡಿಎಸ್ ಕಲಾ ವಾಣಿಜ್ಯ ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ರಾಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ