ರಾಜ್ಯದ ಎಲ್ಲ ಹಾಲು ಒಕ್ಕೂಟಗಳಲ್ಲಿ ಏಕರೂಪದ ಹಾಲಿನ ದರಕ್ಕೆ ಚಿಂತನೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ ನಡೆದ ಚೆಕ್‍ಗಳ ವಿತರಣಾ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕೆಎಂಎಫ್‍ಗೆ ಒಳಪಡುವ ಕೆಲವು ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲಿನ ದರದಲ್ಲಿ ವ್ಯತ್ಯಾಸಗಳಿದ್ದು, ರಾಜ್ಯದಲ್ಲಿರುವ ಎಲ್ಲ ಒಕ್ಕೂಟಗಳಲ್ಲಿ ಏಕರೂಪ ದರ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜಿಲ್ಲಾ ಹಾಲು ಒಕ್ಕೂಟ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅನುದಾನದಡಿ ಕೃತಕ ಗರ್ಭಧಾರಣ ಕಾರ್ಯಕರ್ತರಿಗೆ ಕಿಟ್ ವಿತರಣೆ ಮತ್ತು ಒಕ್ಕೂಟದ ಕಲ್ಯಾಣ ಸಂಘದಿಂದ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ನವ್ಹೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಮಹಾಮಂಡಳಿಯ ಸಾಮಾನ್ಯ ಸಭೆಯಲ್ಲಿ ಏಕರೂಪ ದರ ನಿಗದಿಪಡಿಸುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಬೆಳಗಾವಿ, ವಿಜಯಪುರ ಹಾಗೂ ಧಾರವಾಡ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಪ್ರತಿ ಲೀಟರ್ ಹಾಲಿನ ದರದ ಸಮಸ್ಯೆ ಎದುರಾಗಿದ್ದು, ಬಹುತೇಕ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಒಂದೇ ರೀತಿಯ ದರವಿರುವುದಿಲ್ಲ. ಒಕ್ಕೂಟಗಳಲ್ಲಿ ಎಲ್ಲ ರೈತರ ಹಿತದೃಷ್ಟಿಯಿಂದ ಎಲ್ಲಾ ಒಕ್ಕೂಟಗಳಲ್ಲಿ ಒಂದೇ ದರವನ್ನು ನಿಗದಿ ಮಾಡುವ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಕೆಎಂಎಫ್‍ನಿಂದ ಜಾನುವಾರುಗಳನ್ನು ವಿಮಾ ಯೋಜನೆಗೆ ಒಳಪಡಿಸಿದ್ದು, ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಹಾಲು ಪೂರೈಕೆ ಮಾಡುವ ರೈತರ ಜಾನುವಾರುಗಳು ಮೃತಪಟ್ಟಲ್ಲಿ 50 ಸಾವಿರ ರೂ.ಗಳವರೆಗೆ ವಿಮಾ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಒತ್ತೇ ಇಟ್ಟು ಕಾರ್ಯನಿರ್ವಹಿಸಿದ ಕೆಎಂಎಫ್‍ನ ಎಲ್ಲ ಸಿಬ್ಬಂದಿಗಳನ್ನು ಅಭಿನಂದಿಸಿದ ಅವರು, ಆ ಸಂದರ್ಭದಲ್ಲಿ ಬೆಳಿಗ್ಗೆ 4 ಗಂಟೆಯಿಂದ ಕೆಲಸ ನಿರ್ವಹಿಸಿ ಎಲ್ಲರಿಂದ ಪ್ರಶಂಸೆಗೆ ಒಳಪಟ್ಟಿದ್ದಾರೆ. ಅಂತಹ ಸಿಬ್ಬಂದಿಗಳಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆ ನೀಡುವ ಪ್ರಸ್ತಾಪವನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ವಾರ್ಷಿಕವಾಗಿ 50 ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ವರ್ಷ ಸರ್ಕಾರವೇ ಈ ವೆಚ್ಚವನ್ನು ಭರಿಸಲಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟಕ್ಕೆ ದಿನಾಲೂ 15 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಕೆಎಂಎಫ್‍ಗೆ 2 ಲಕ್ಷ ಲೀಟರ್ ಹಾಲು ಬರುತ್ತಿದೆ. ಉಳಿದ ಹಾಲು ಬೇರೆಡೆ ಹೋಗುತ್ತಿದೆ. ಕೆಎಂಎಫ್ ಎಂದಿಗೂ ಲಾಭ-ನಷ್ಟದ ಕುರಿತು ಯೋಚಿಸಿಲ್ಲ. ರೈತರ ಹಿತಕಾಯುವ ಕೆಲಸ ಮಾಡುತ್ತಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಹಾಲನ್ನು ಕೆಲವರು ನೆಲಕ್ಕೆ ಚೆಲ್ಲಿದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಆ ಹಿನ್ನೆಲೆಯಲ್ಲಿ ಹಾಲು ನಿರರ್ಥಕವಾಗಬಾರದೆನ್ನುವ ಉದ್ಧೇಶದಿಂದ ಆಗಿನ ಸಿಎಂ ಯಡಿಯೂರಪ್ಪನವರು ಸ್ಲಂ ನಿವಾಸಿಗಳಿಗೆ ಉಚಿತ ಹಾಲನ್ನು ನೀಡಿದ್ದರು. ಇದರಿಂದ ರೈತರಿಗೂ ಹಾಗೂ ಬಡ ಕುಟುಂಬಗಳಿಗೆ ನೆರವಾಯಿತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಕೃತಕ ಗರ್ಭದಾರಣೆ ಸಿಬ್ಬಂದಿಗಳಿಗೆ ಕಿಟ್‍ಗಳನ್ನು ವಿತರಿಸಿದರು. ರೈತ ಕಲ್ಯಾಣ ಸಂಘದಿಂದ ಮೃತಪಟ್ಟ ಸದಸ್ಯರ ವಾರಸುದಾರರಿಗೆ ತಲಾ 10 ಸಾವಿರ ರೂ.ಗಳಂತೆ ಒಟ್ಟು 23 ಫಲಾನುಭವಿಗಳಿಗೆ ಚೆಕ್‍ಗಳನ್ನು ವಿತರಿಸಿದರು. ಒಕ್ಕೂಟದ ರಾಸು ವಿಮಾ ಯೋಜನೆಯಡಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಮೃತಪಟ್ಟ 11 ಪಶುಗಳ ರೈತರಿಗೆ ತಲಾ 50 ಸಾವಿರ ರೂ.ಗಳಂತೆ ಪರಿಹಾರ ಧನ ಚೆಕ್ ವಿತರಿಸಿದರು. ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ನಿರ್ಮಾಣಕ್ಕೆ ಮೊದಲ ಕಂತು 1.75 ಲಕ್ಷ ರೂ.ಗಳ ಸಹಾಯಧನದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ವಿಸ್ತರಣಾಧಿಕಾರಿಗಳಾದ ಎಸ್.ಬಿ. ಕರಬನ್ನವರ, ರವಿ ತಳವಾರ, ನಾಗನೂರಿನ ಮುತ್ತೆಪ್ಪ ಖಾನಪ್ಪಗೋಳ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು-ಕಾರ್ಯದರ್ಶಿಗಳು ಉಪಸ್ಥಿತರಿದ್ದರು.