ಮೂಡಲಗಿ: ‘ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ವೃದ್ಧಿಸಿ ಉತ್ತಮ ಇಳುವರಿಯನ್ನು ಪಡೆಯುತ್ತಿರುವ ಕಲ್ಲೋಳಿಯ ಕೃಷಿಕ ಬಾಳಪ್ಪ ಬಿ. ಬೆಳಕೂಡ ಅವರ ಸಾಧನೆಯು ಅಪೂರ್ವವಾಗಿದೆ’ ಎಂದು ಅಮೆರಿಕಾದ ಕೃಷಿಯಲ್ಲಿ ನೀರು ನಿರ್ವಹಣೆ ಮತ್ತು ಎಲೆಗಳ ವಿಜ್ಞಾನಿ ಚಾಲ್ರ್ಸ ರಿಚರ್ಡ ಅವರು ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ಕೃಷಿಕ ಬಾಳಪ್ಪ ಬಿ. ಬೆಳಕೂಡ ಅವರ ತೋಟಕ್ಕೆ ಭೇಟ್ಟಿ ನೀಡಿ ಕಬ್ಬು, ಅರಿಷಿನ, ಸೋಯಾ ಅವರೆ ಮತ್ತು ಇತರೆ ಬೆಳೆಗಳನ್ನು ವೀಕ್ಷಿಸಿ ಮಾತನಾಡಿದ ಅವರು ಯಾವ ರೈತರು ಭೂಮಿಯಲ್ಲಿ ನೀರಿನ ಮಿತ ಬಳಕೆಯೊಂದಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ ಅವರು ಉತ್ತಮ ಇಳುವರಿ ಪಡೆಯಲು ಸಾಧ್ಯ ಅಂಥ ಸಾಧ್ಯತೆಗಳನ್ನು ಬೆಳಕೂಡ ಅವರ ಕೃಷಿಯಲ್ಲಿ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಅಮೆರಿಕಾದಲ್ಲಿ ಸಣ್ಣ ಹಿಡುವಳಿಗಾರರಿಗಿಂತ ದೊಡ್ಡ ಹಿಡುವಳಿಗಾರರು ಅಧಿಕ ಸಂಖ್ಯೆಯಲ್ಲಿದ್ದು ಕೃಷಿಯಲ್ಲಿ ಯಂತ್ರಗಳ ಯತೆಚ್ಛವಾಗಿ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಭಾರತದಲ್ಲಿ ಸಣ್ಣ ಹಿಡುವಳಿಗಾರರು ಸಹ ಮಾನವ ಸಂಪನ್ಮೂಲ ಮತ್ತು ಸಾವಯವದೊಂದಿಗೆ ಅಧಿಕ ಇಳುವರಿ ಪಡೆಯುತ್ತಿರುವುದು ಗಮನಾರ್ಹವಾಗಿದೆ ಎಂದರು.
ಮಿತಬಳಕೆಯ ವಿಧಾನಗಳನ್ನು ಅನುಸರಿಸಿ ನೀರನ್ನು ಅಗತ್ಯವಿದ್ದಷ್ಟು ಮಾತ್ರ ಬಳಸುವುದರಿಂದ ಬೆಳೆಯ ಉತ್ತಮ ಇಳುವರಿ ಪಡೆಯಲು ಸಾಧ್ಯ. ರೈತರು ನೀರಿನ ನಿರ್ವಹಣೆ ಬಗ್ಗೆ ತಿಳಿದಿರಬೇಕು ಎಂದರು.
ರೈತ ಬಾಳಪ್ಪ ಬಿ. ಬೆಳಕೂಡ ಮಾತನಾಡಿ ಕಳೆದ ಎರಡುವರೆ ದಶಕಗಳ ಪರಿಶ್ರಮದ ಫಲವಾಗಿ ನಮ್ಮ ತೋಟದ ಮಣ್ಣಿನ ಫಲವತ್ತತೆಯು ಉತ್ತಮವಾಗಿರುವುದಕ್ಕೆ ಕಾರಣವಾಗಿದೆ. ಸದ್ಯ ಸೋಯಾಬಿನ್ ಎಕರೆಗೆ 26 ಕ್ವಿಂಟಲ್‍ವರೆಗೆ ಇಳುವರಿ ಪಡೆದಿದ್ದು, ಈ ಹಂಗಾಮಿಗೆ 30 ಕ್ವಿಂಟಲ್ ತೆಗೆಯುವ ಗುರಿ ಇದೆ ಎಂದರು.
ಅಮೆರಿಕಾದ ಇನ್ನೊರ್ವ ಕೃಷಿ ವಿಜ್ಞಾನಿ ಜರೀರ, ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕೆಐಎಎ ವಿಭಾಗದ ನಿರ್ದೇಶಕ ಡಾ. ನಂದಕುಮಾರ, ಕಬ್ಬು ವಿಭಾಗದ ಮಹಾಪ್ರಬಂಧಕ ಎ.ಎಸ್. ಕಣಬೂರ, ವಿಶ್ವನಾಥ ಭುಜನ್ನವರ, ಮೂಡಲಗಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಗದಾಡಿ, ನಿರ್ದೇಶಕರಾದ ರಾಜು ಕಡಲಗಿ, ಭೀಮರಾಯ ಕಡಾಡಿ, ಶಿವಾನಂದ ಹೆಬ್ಬಾಳ, ರಾಮಪ್ಪ ಬೆಳಕೂಡ, ಗುರುನಾಥ ಮಲ್ಲಾಪೂರ ಹಾಗೂ ತಾಲ್ಲೂಕಿನ ರೈತರು ಭಾಗವಹಿಸಿದ್ದರು.