ಮೂಡಲಗಿ: ಕಳೆದ ಒಂದು ವರ್ಷದಿಂದ ಕರೋನಾ ಮಹಾಮಾರಿಯ ಅಟ್ಟಹಾಸಕ್ಕೆ ನಲುಗಿದ ದೇಶ ಅನಿವಾರ್ಯವಾಗಿ 2 ಭಾರಿ ಲಾಕ್‍ಡೌನ್ ಮಾಡಬೇಕಾಯಿತು. ಇದರ ಪರಿಣಾಮ ಉದ್ಯಮಗಳು, ವಿಮಾನ, ರೈಲು, ಬಸ್, ಟ್ರಕ್ ಸೇರಿದಂತೆ ಸಾರಿಗೆ ವ್ಯವಸ್ಥೆ, ಹೊಟೇಲ್‍ಗಳು, ಚಿತ್ರಮಂದಿರಗಳು, ಮಾಲ್‍ಗಳು, ಮದುವೆ, ಜಾತ್ರೆ ಒಟ್ಟಿನಲ್ಲಿ ದೇಶದ ಎಲ್ಲಾ ವ್ಯವಹಾರಗಳು ನಿಂತು ಹೋದವು, ಆದರೆ ಕರೋನಾ ಹಿಮ್ಮೆಟ್ಟಿಸಿ ಪ್ರತಿ ವರ್ಷಕ್ಕಿಂತ ಶೇ 10 ರಷ್ಟು ಹೆಚ್ಚು ಉತ್ಪಾದನೆ ಮಾಡಿದ ಅನ್ನದಾತನ ಕೃಷಿ ಕಾಯಕ ಮಾತ್ರ ನಿಂತಿಲ್ಲ, ನಿಜಕ್ಕೂ ರೈತರು ಅಭಿನಂದನಾರ್ಹರು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಶ್ಲಾಘಿಸಿದರು.
ಶನಿವಾರ ಮೇ 29 ರಂದು ಅರಭಾವಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಈರಣ್ಣ ಕಡಾಡಿ ಅವರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಮೂಡಲಗಿ ತಾಲೂಕಿಗೆ ಇನ್ನಷ್ಟು ಮಳೆಯಾಗಬೇಕಾದ ಅವಶ್ಯಕತೆ ಇದೆ. ಆದರೂ ಕೂಡಾ ರೈತರು ಬಿತ್ತನೆಯನ್ನು ಪ್ರಾರಂಭಿಸಿದ್ದಾರೆ. ರೈತರು ಒಂದೇ ಬೆಳೆಗೆ ಅಂಟಿಕೊಳ್ಳದೇ ತಮ್ಮ ಜಮೀನಿನಲ್ಲಿ ಬೇರೆ ಬೇರೆ ತರನಾದ ಬೆಳೆಗಳನ್ನು ಬೆಳೆಯುವ ಮೂಲಕ ಆಹಾರ ಧಾನ್ಯಗಳ ಸಮತೋಲನ ಕಾಪಾಡಬೇಕಾದದ್ದು ಅತ್ಯಂತ ಅವಶ್ಯ ಎಂದರು.
ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಒಟ್ಟು 18 ಬೀಜ ಮಾರಾಟ ಕೇಂದ್ರಗಳನ್ನು ತೆರಯಲಾಗಿದ್ದು, ಸರ್ಕಾರದ ಸಹಾಯಧನದಡಿ ವಿವಿಧ ಬೆಳೆಗಳ ಬೀಜಗಳಾದ ಸೊಯಾಬಿನ್, ಗೋವಿನಜೋಳ, ಹೆಸರು, ಉದ್ದು, ಜೋಳ, ಸೂರ್ಯಕಾಂತಿ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತದೆ. ರೈತರು ಕೋವಿಡ್ 19 ನಿಯಮಗಳನ್ನು ಪಾಲಿಸಿ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿ ಬೀಜಗಳನ್ನು ಪಡೆಯಲು ರೈತರಲ್ಲಿ ಕೋರಿದರು.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ನನ್ನ ಬೆಳೆ ನನ್ನ ಹಕ್ಕು ಮೋಬೈಲ್ ಆ್ಯಫ್ ಮುಖಾಂತರ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ದಾಖಲಿಸಿಕೊಂಡು ಸರ್ಕಾರದ ಸಹಾಯಧನ ಸೇರಿದಂತೆ ವಿಮೆ ಸೌಲಭ್ಯಗಳನ್ನು ಪಡೆಯಬಹುದು. ರೈತರು ಈ ಬಗ್ಗೆ ಗಮನಹರಿಸಬೇಕಾಗಿ ವಿನಂತಿಸಿದರು. ಕೇಂದ್ರ ಸರ್ಕಾರ ರಸಗೊಬ್ಬರ ದರ ಏರಿಕೆಯಾಗದಂತೆ ಸಾಕಷ್ಟು ಸಹಾಯಧನ ನೀಡಿದ್ದು ರೈತರಿಗೆ ಗೊಬ್ಬರದ ಕೊರತೆಯಾಗದಂತೆ ಕ್ರಮವಹಿಸಿದೆ ಎಂದರು.
ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ. ಎಂ. ನದಾಫ್, ಕೃಷಿ ಅಧಿಕಾರಿ ಶಂಕರ ಹಳದಮನಿ, ಪರಸಪ್ಪ ಹುಲಗಬಾಳ, ಸಹಾಯಕ ಕೃಷಿ ಅಧಿಕಾರಿ ವಿ. ಬಿ ಬಿರಾಜ, ಬೆಳಗಾವಿ ಗ್ರಾಮೀಣ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಅರಭಾವಿ ಬಿಜೆಪಿ ಮಂಡಲ ಉಪಾಧ್ಯಕ್ಷ ಸುರೇಶ ಮಠಪತಿ, ಕಾರ್ಯದರ್ಶಿ ಅಡಿವೆಪ್ಪ ಕುರಬೇಟ, ಪ್ರಗತಿ ಪರ ರೈತ ಗೋವಿಂದ ಕಾಚ್ಯಾಗೋಳ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
