ಜಾನುವಾರುಗಳನ್ನು ಕಂದು ರೋಗದಿಂದ ಮುಕ್ತಗೊಳಿಸಬೇಕು
ಮೂಡಲಗಿ: ‘ರೈತರು ಕರುಗಳಿಗೆ ಲಸಿಕೆಯನ್ನು ಹಾಕಿಸುವ ಮೂಲಕ ಕಂದು ರೋಗದಿಂದ ಮುಕ್ತಗೊಳಿಸಬೇಕು’ ಎಂದು ಮೂಡಲಗಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಂ.ಬಿ. ವಿಭೂತಿ ಹೇಳಿದರು.
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆ ಅಡಿಯಲ್ಲಿ ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಶು ಆಸ್ಪತ್ರೆಯಲ್ಲಿ ಸೋಮವಾರ ಕಂದು ರೋಗದ ಲಸಿಕಾ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೈತರು ಜಾನುವಾರುಗಳ ಆರೋಗ್ಯ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು ಎಂದರು.
4ರಿಂದ 8 ತಿಂಗಳ ಪ್ರಾಯದ ಎಮ್ಮೆ ಮತ್ತು ಹಸುಗಳ ಹೆಣ್ಣು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದ್ದು ರೈತರು ಹೆಣ್ಣು ಕರುಗಳಿಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಬೇಕು. ಕಂದು ರೋಗವು ಜಾನುವಾರಗಳಿಂದ ಮನುಷ್ಯರಿಗೂ ಪ್ರಸಾರವಾಗುವ ಅಪಾಯ ಇರುವುದರಿಂದ ರೋಗದ ಬಗ್ಗೆ ಹೆಚ್ಚು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಪರಿವಾರಿದ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ಜಾನುವಾರುಗಳ ಆರೋಗ್ಯ ಸಂರಕ್ಷಣೆಗೆ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಮನುಷ್ಯರಂತೆ ಜಾನುವಾರುಗಳ ಆರೋಗ್ಯ ಸಹ ಮುಖ್ಯವಾಗಿದೆ. ಜಾನುವಾರುಗಳನ್ನು ರೋಗಗಳಿಂದ ಮುಕ್ತಗೊಳಿಸಿ ಪಶು ಸಂಪತ್ತು ವೃದ್ಧಿಸಲು ಮುಂದಾಗಬೇಕು ಎಂದರು.
ಪಶು ಸಂಗೋಪನಾ ಇಲಾಖೆಯ ಮಹಾಂತೇಶ ಹೊಸೂರ, ಶಂಕರ ಶಾಬನ್ನವರ, ಶಿವರುದ್ರಪ್ಪ ಮಿಲ್ಲಾನಟ್ಟಿ, ಲಕ್ಷ್ಮಣ ಕಂಕಣವಾಡಿ, ಎ.ವಿ. ಕುಲಕರ್ಣಿ, ಲಯನ್ಸ್ ಪರಿವಾರ ಸದಸ್ಯರಾದ ಡಾ. ಎಸ್.ಎಸ್. ಪಾಟೀಲ, ಪುಲಕೇಶ ಸೋನವಾಲಕರ, ಸಂಜಯ ಮೋಕಾಶಿ, ಶಿವಾನಂದ ಕಿತ್ತೂರ, ಶಿವಾನಂದ ಗಾಡವಿ, ಶ್ರೀಶೈಲ್ ಲೋಕನ್ನವರ ಇದ್ದರು.
ಲಯನ್ಸ್ ಪರಿವಾರದ ಖಜಾಂಚಿ ಸುಪ್ರೀತ ಸೋನವಾಲಕರ ನಿರೂಪಿಸಿ, ವಂದಿಸಿದರು.