ಇಂದಿನ ಮಕ್ಕಳು ಭವಿಷ್ಯತ್ತಿನ ರಾಷ್ಟ್ರ ನಿರ್ಮಾಪಕರು
ಮೂಡಲಗಿ: ‘ಇಂದಿನ ಮಕ್ಕಳು ಭವಿಷತ್ತಿನ ರಾಷ್ಟ್ರ ನಿರ್ಮಾಣದ ರೂವಾರಿಗಳಾಗಿದ್ದು, ಮಕ್ಕಳಲ್ಲಿಯ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಭಾನುವಾರ ಆಚರಿಸಿದ ಮಕ್ಕಳ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ರೀತಿಯ ಪರಿಸರವನ್ನು ನಿರ್ಮಿಸಬೇಕು ಎಂದರು.
ಲಯನ್ಸ್ ಕ್ಲಬ್‍ದ ಕಾರ್ಯದರ್ಶಿ ಡಾ. ಸಂಜಯ ಶಿಂದಿಹಟ್ಟಿ ಮಾತನಾಡಿ ಮಕ್ಕಳು ಶಿಸ್ತು, ಪ್ರಾಮಾಣಿಕತೆಯನ್ನು ಬೆಳೆಸಿಕೊಂಡು ಶ್ರೇಷ್ಠ ನಾಗರಿಕರಾಗುವ ಕನಸು ಕಾಣಬೇಕು ಎಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 27ನೇ ರ್ಯಾಂಕ್ ಪಡೆದಿರುವ ಲಯನ್ಸ್ ಕ್ಲಬ್ ಸದಸ್ಯ ಶಿವಾನಂದ ಕಿತ್ತೂರ ಅವರ ಚಿರಂಜೀವಿ ರಾಘವೇಂದ್ರ ಕಿತ್ತೂರ ಮತ್ತು ಮೊರಾರ್ಜಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವೈಶಾಲಿ ಸುಭಾಷ ಹಾದಿಮನಿ ಅವರನ್ನು ಸನ್ಮಾನಿಸಿದರು.
ಪ್ರಾರಂಭದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಲಯನ್ಸ್ ಕ್ಲಬ್‍ದಿಂದ ಎಲ್ಲ ಮಕ್ಕಳಿಗೆ ಸಿಹಿ ಮತ್ತು ಪೆನ್‍ಗಳನ್ನು ವಿತರಿಸಿದರು.
ಶಿಕ್ಷಕ ಎಡ್ವಿನ್ ಪರಸನ್ನವರ ಪ್ರಾಸ್ತಾವಿಕ ಮಾತನಾಡಿ ಮಕ್ಕಳ ದಿನಾಚರಣೆಯನ್ನು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಚರಿಸುತ್ತಿರುವ ಲಯನ್ಸ್ ಕ್ಲಬ್‍ದ ಕಾರ್ಯವನ್ನು ಶ್ಲಾಘೀಸಿದರು.
ಲಯನ್ಸ್ ಕ್ಲಬ್‍ನ ವೆಂಕಟೇಶ ಸೋನವಾಲಕರ, ಸಂಜಯ ಮೋಕಾಸಿ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಶಿವಾನಂದ ಕಿತ್ತೂರ, ಸಿಆರ್‍ಪಿ ಸಮೀರ ದಬಾಡಿ, ಮುಖ್ಯ ಶಿಕ್ಷಕ ಬಿ.ಎಚ್. ಹುಲ್ಯಾಳ, ಎ.ಪಿ. ಪರಸನ್ನವರ, ಶಿಕ್ಷಕಿಯರಾದ ಡಿ.ಎ. ಹದ್ಲಿ, ಎ.ಎಲ್. ಯರನಾಳೆ, ಆರ್.ಡಿ. ಮಳಲಿ, ಎಸ್.ಎಸ್. ಕಮ್ಮಾರ, ಎಸ್.ಬಿ. ಜಕಾತಿ, ಜೆ.ಎಸ್. ಅನ್ನಿಗೇರಿ, ವಿ.ಎಸ್. ಹಲಸಿ ಸಮಾರಂಭದಲ್ಲಿ ಇದ್ದರು.