17 ವರ್ಷ ಕಾಣೆಯಾಗಿ ಮತ್ತೆ ತಾಯಿ ಮಡಿಲು ಸೇರಿದ ಮಗ
ಮೂಡಲಗಿ: ಇಲ್ಲಿನ ಮಾಜಿ ಪುರಸಭೆ ಸದಸ್ಯ ಈರಪ್ಪ ಬನ್ನೂರ ಅವರ ಸೋದರ ಸಂಬಂಧಿ ಬಸವರಾಜ ಬಾಳಪ್ಪ ಗಡ್ಡಿ ಈತನು 17 ವರ್ಷಗಳ ಹಿಂದೆ ಮೂಡಲಗಿ ತಾಲೂಕಿನ ಪಕ್ಕದ ತನ್ನ ಗ್ರಾಮ ಹಳ್ಳೂರದಿಂದ ಶ್ರೀಶೈಲ ಯಾತ್ರೆಗೆ ಹೋಗುವ ಭಕ್ತರನ್ನು ಹಿಂಬಾಲಿಸಿ ಕಳೆದುಹೋಗಿ ಮತ್ತೆ ತಾಯಿ ಮಡಿಲು ಸೇರಿರುವ ಹೃದಯಸ್ಪರ್ಶಿ ಘಟನೆ ಇತ್ತೀಚಿಗೆ ಜರುಗಿದೆ
2005ರಲ್ಲಿ ಕಾಣೆಯಾಗಿದ್ದ ಈತ ಈತನಕ ಮನೆಗೆ ಬಂದಿರಲಿಲ್ಲ ಅವನನ್ನು ಹುಡುಕಾಡಿದ ಸ್ಥಳಗಳಿಲ್ಲ ಎನ್ನುವಂತೆ ಎಲ್ಲ ಕಡೆಯೂ ಹುಡುಕಿದರೂ ಅವನ ಪತ್ತೆಯಾಗಿರಲಿಲ್ಲ. ಪುತ್ರ ಶೋಕಂ ನಿರಂತರಂ ಎನ್ನುವಂತೆ ಅವನ ಕೊರಗಿನಲ್ಲಿಯೇ ತಂದೆ ಭಾಳಪ್ಪ ನಿಧನರಾದರು. ಬಸವರಾಜ ಇಂದೋ ನಾಳೆಯೋ ಬರಬಹುದು ಎಂಬ ಭರವಸೆ ಸುಳ್ಳಾಗತೊಡಗಿದಾಗ ಆತನ ಸಹೋದರಿ ಶೋಭವ್ವ ಕೂಡ ನಿಧನರಾಗಿ ಬಿಟ್ಟರು. ಹಿರಿಯ ತಾಯಿ ಜೀವ ಮಾತ್ರ ಅವನ ಬರುವಿಕೆಯ ಭರವಸೆಯಲ್ಲಿ ನಿತ್ಯ ದಿನ ಕಳೆಯುತ್ತಿದ್ದಳು.
ವಿಸ್ಮಯವೆನ್ನುವಂತೆ ಕಳೆದುಕೊಂಡಿದ್ದ ಬಸವರಾಜ ಗದಗ ಜಿಲ್ಲೆಯ ಯಡೂರ (ಜಾಲಡಗಿ) ಗ್ರಾಮದಲ್ಲಿ ಬೀರಪ್ಪ ಫಕೀರಪ್ಪ ಹರಕಿ ಅವರ ಮನೆಯಲ್ಲಿ ವಾಸವಾಗಿರುವ ವಿಷಯವು ತಾಲೂಕಿನ ನಾಗನೂರ ಗ್ರಾಮದ ಬನೆನ್ನವರ ಕುಟುಂಬದವರ ಮೂಲಕ ತಿಳಿದ ಮೇಲೆ ಹಳ್ಳೂರಿನಿಂದ ಬಸವರಾಜನ ತಾಯಿ ಮಹಾದೇವಿ ಅವರು ತಮ್ಮ ಸಂಬಂಧಿಕರಾದ ಸತ್ಯಪ್ಪ ಸನದಿ ಹಾಗೂ ಅಲ್ಲಿನ ಮುಖಂಡರೊಂದಿಗೆ ಜಾಲಡಗಿ ಗ್ರಾಮಕ್ಕೆ ತೆರಳಿ ಮಗನನ್ನು ಮರಳಿ ಪಡೆದಿದ್ದಾರೆ.
17ವರ್ಷ ತಮ್ಮ ಮಗನಂತೆ ಸಾಕಿ ಸಲುಹಿದ ಹರಕಿ ಕುಟುಂಬದವರು ಬಸವರಾಜನನ್ನು ಭಾರವಾದ ವಲ್ಲದ ಮನಸ್ಸಿನಿಂದ ಕಳುಹಿಸಿದ್ದಾರೆ. 17 ವರ್ಷಗಳ ನಂತರ ಮರಳಿ ತಾಯಿ ಮಡಲಿಗೆ ಸೇರಿಸುವಲ್ಲಿ ಶ್ರಮ ವಹಿಸಿದ ನಾಗನೂರ ಮತ್ತು ಹಳ್ಳೂರ ಗ್ರಾಮದ ಹಿರಿಯರನ್ನು ಹಾಗೂ ಸಾಕಿ ಸಲುಹಿದ ಜಾಲಡಗಿ ಗ್ರಾಮದ ಬೀರಪ್ಪ ಅವರನ್ನು ಮೂಡಲಗಿ ಪುರಸಭೆ ಸದಸ್ಯ (ಬಸವರಾಜನ ಸೋದರ ಸಂಬಂಧಿ) ಈರಪ್ಪ ಬನ್ನೂರ ಅವರು ಸತ್ಕಾರ ಕಾರ್ಯಕ್ರಮ ಹಮ್ಮಿಕೊಂಡು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಪಿಎಸೈ ಎಚ್ ವೈ ಬಾಲದಂಡಿ, ಮಾಳಿ ಸಮಾಜದ ಹಿರಿಯರಾದ ಮುತ್ತಪ್ಪ ಈರಪ್ಪನವರ, ಮಾಜಿ ಪುರಸಭೆ ಅಧ್ಯಕ್ಷ ರಾಮಣ್ಣ ಹಂದಿಗುಂದ, ತಮ್ಮಣ್ಣ ಗಡಾದ, ಪ್ರಕಾಶ ಈರಪ್ಪನವರ, ಶಿಕ್ಷಕ ಬಸವರಾಜ ನಿಡೋಣಿ, ಬೀರಪ್ಪ ಬನೆನ್ನವರ, ಸತ್ಯಪ್ಪ ಕದ್ದಿ, ಯಲ್ಲಪ್ಪ ಕದ್ದಿ, ಮಹಾದೇವ ತೋಟಗಿ, ಮುತ್ತಪ್ಪ ಹುಲ್ಯಾಳ, ಮುರಿಗೆಪ್ಪ ಮಾಲಗಾರ, ಬಸಪ್ಪ ಮಾಲಗಾರ, ಬಸು ಹಳಿಗೌಡರ, ವಿಠ್ಠಲ ಕಮತೆ ಮತ್ತಿತರರು ಇದ್ದರು.