ಸಮಾಜದ ಮೌಡ್ಯತೆಗಳನ್ನು ಕನಕದಾಸರ ಕೀರ್ತನೆಗಳು ತಿದ್ದುವ ಮೌಲ್ಯ ಹೊಂದಿವೆ : ಗಂಗಾಧರ ಮನ್ನಾಪೂರ
ಮೂಡಲಗಿ : ಸಮಾಜದ ಮೌಡ್ಯತೆಗಳನ್ನು ಕನಕದಾಸರ ಕೀರ್ತನೆಗಳು ತಿದ್ದುವ ಮೌಲ್ಯವನ್ನಾಧರಿಸಿ ರೂಪಗೊಂಡಿದ್ದು ಪ್ರತಿಯೊಂದು ಶತಮಾನಕ್ಕೂ ಸಮಾಜದ ಚಿಂತನೆಗಳನ್ನು ಬಿಂಬಿಸುವ ಸಾತ್ವಿಕ ವಿಚಾರಗಳನ್ನು ಕನಕದಾಸರ ಕೀರ್ತನೆಗಳಲ್ಲಿ ಕಾಣಬಹುದು ಕನಕದಾಸರು ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ, ಹರಿಭಕ್ತರಾದರಂಬ ಉಲ್ಲೇಖವಿದೆ ಎಂದು ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಗಂಗಾಧರ ಮನ್ನಾಪೂರ ಹೇಳಿದರು.
ಅವರು ಸ್ಥಳೀಯ ಆರ್.ಡಿ.ಎಸ್ ಪದವಿ ಮಹಾವಿದ್ಯಾಲಯ, ಪದವಿ ಪೂರ್ವ ಮಹಾವಿದ್ಯಾಲಯ ಆಯ್.ಟಿ.ಆಯ್ ಎನ್.ಎಸ್.ಎಸ್. ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕನಕದಾಸರ ಕಾರ್ಯಕ್ರಮದಲ್ಲಿ ಮಾತನಾಡಿ ಪೂಜ್ಯರ ಸಾಹಿತ್ಯದ ಮೂಲಕ ನೀಡಿದ ಸಂದೇಶಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದರು.
ಅತಿಥಿ ಪದವಿ ಕಾಲೇಜಿನ ಉಪನ್ಯಾಸಕ ಸಂಜೀವ ಮಂಟೂರ ಮಾತನಾಡುತ್ತಾ ಕನಕದಾಸರು ತಿಮ್ಮಪ್ಪ ಎಂಬ ಹೆಸರಿನಿಂದ ನಂತರ ತಿಮ್ಮಪ್ಪನಾಯಕನಾಗಿ ಗುರ್ತಿಸಿಕೊಂಡು ಹೆಂಡತಿ ತಾಯಿ ತಂದೆಯನ್ನು ಕಳೆದುಕೊಂಡು ಭಗವಂತನ ವಾಣಿಯಂತೆ ದಾಸರಾಗಿ ಭಗವಂತನ ಸ್ಮರಣೆಯೊಂದಿಗೆ ಸಾಮಾಜಿಕ ಕಂದಾಚಾರಗಳನ್ನು ಹೋಗಲಾಡಿಸಲು ಪ್ರಯತ್ನಿಸಿ ದೇವರ ಆಕಾರ ನಿರಾಕಾರ ಮತ್ತು ಜಾತಿ ಪದ್ದತಿಯನ್ನು ಬಲ್ಲವರಾರು ಎಂದು ತಿಳಿಸಿದರು.
ಆಯ್.ಟಿ.ಆಯ್ ಕಾಲೇಜಿನ ಪ್ರಾಚಾರ್ಯರಾದ ಚಿದಾನಂದ ಶೆಟ್ಟರ ಮಾತನಾಡಿ ಕನಕದಾಸರ ವಿಚಾರಗಳಲ್ಲಿ ನಾನು ನನ್ನದು ಎಂಬ ಅಹಂಕಾರ ಒಳ್ಳೆಯದಲ್ಲ ಸಿರಿತನ ಬಡತನ ಶಾಶ್ವತವಲ್ಲ ಮಾನವ ಕುಲ ಒಂದೇ ಜಾತಿಗಳಿಂದ ಕಚ್ಚಾಡಬೇಡಿ ಭಗವಂತನ ನಾಮಸ್ಮರಣೆಯಿಂದ ಮೋಕ್ಷ ಪಡೆದುಕೊಳ್ಳಿ ಎಂಬ ಅವರ ಸಂದೇಶ ನವ ಸಮಾಜಕ್ಕೆ ಸ್ಪೂರ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಸಿಬ್ಬಂದಿ ಕೆಂಪಣ್ಣಾ ಕನಿಕಿಕೋಡಿ ಬೆಂಗಳೂರಿನ ಮನಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯಕೇಶನ್ ಇಲ್ಲಿಂದ ಡಾಕ್ಟರೇಟ್ ಪದವಿ ಪಡೆದುಕೊಂಡದಕ್ಕಾಗಿ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ದಾರ್ಶನಿಕರ ಚಿಂತನೆಗಳು ನಮ್ಮ ಯುವ ಪೀಳಿಗೆಗೆ ಆಧುನಿಕ ಸಮಾಜದ ನಿರ್ಮಾಣಕ್ಕೆ ಸ್ಪೂರ್ತಿದಾಯಕವಾಗಿವೆ ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಸತ್ಯೇಪ್ಪ ಗೋಟೂರೆ ಮಾತನಾಡಿ ಕನಕದಾಸರ ಸಾಹಿತ್ಯ ಮತ್ತು ಕೀರ್ತನೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ & ಸ್ವಾರ್ಥ ರಹಿತ ಸಮಾಜಕ್ಕೆ ಉತ್ತಮ ಮೌಲ್ಯಾತ್ಮಕ ಸಂದೇಶಗಳಾಗಿದ್ದು ಇಂದಿನ ಆಧುನಿಕತೆಯಲ್ಲಿ ಮಾನವೀಯತೆ ಮರೆಯುತ್ತಿರುವ ಸಮಾಜ ನಿರ್ಮಾಣವಾಗುತ್ತಿದ್ದು ಕನಕದಾಸರ ಸಾಹಿತ್ಯ ಚಿಂತನೆಗಳನ್ನು ಅಳವಡಿಸಿಕೊಂಡು ಮೌಲ್ಯಾತ್ಮಕ ಸಮಾಜದ ನಿರ್ಮಾಣಕ್ಕೆ ಆಧ್ಯತೆ ನೀಡುವುದು ಅವಶ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಪಿ ಯು ಕಾಲೇಜು ಪ್ರಾಚಾರ್ಯ ಸಂಜೀವ ವಾಲಿ ಹಾಗೂ ಉಪನ್ಯಾಸಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಜಿ.ಟಿ. ನರಗುಂದ ಸ್ವಾಗತಿಸಿದರು ಎಂ. ಆಯ್. ಜಾಡರ ನಿರೂಪಿಸಿ ವಂದಿಸಿದರು.