ಮೂಡಲಗಿ: ಗಂಡು ಹೆಣ್ಣಿನ ನಡುವೆ ನಾನು ಮೇಲು ತಾನು ಮೇಲು ಎಂಬ ಪೈಪೋಟಿ ನಡೆಯುತ್ತಿದ್ದರೂ ಜೀವನದ ಪ್ರತಿ ಹಂತದಲ್ಲೂ ಗಂಡು ಹೆಣ್ಣಿನಿಗೆ ಪ್ರೋತ್ಸಾಹ ನೀಡಬೇಕು, ಹೆಣ್ಣು ಗಂಡನಿಗೆ ಪ್ರೋತ್ಸಾಹ ನೀಡಿದರೇ ಮಾತ್ರ ಸಾಧನೆ ಎಂಬ ಮೆಟ್ಟಿಲು ಏರಲು ಸಾಧ್ಯ ಎಂದು ಚಲನಚಿತ್ರ ನಟಿ ಮಾಲತಿಶ್ರೀ ಮೈಸೂರು ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚಾರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದು ಪೈಪೋಟಿಯ ಯುಗ, ವಿದ್ಯಾರ್ಥಿಗಳ ಮಧ್ಯೆ, ಕಲಾವಿದರ ಮಧ್ಯೆ, ಹೀಗೆ ಎಲ್ಲ ವರ್ಗದಲ್ಲೂ ಗಂಡು-ಹೆಣ್ಣಿನ ನಡುವೆಯೂ ಪೈಪೋಟಿ ಬೆಳೆಯುತ್ತಿದೆ. ಆದರೆ ಜೀವನ ಎಂಬ ದಾರಿಯಲ್ಲಿ ಹಾಗೂ ಸಂತಾನೋತ್ಪತ್ತಿಗೂ ಗಂಡು ಹೆಣ್ಣೇ ಮೂಲ ಕಾರಣ ಇದು ಪ್ರಕೃತಿ ಸೃಷ್ಟಿ ಎಂದರು.
ಮಹಿಳೆಯರು ಪುರುಷರ ಸಮನಾಗು ನಿಲ್ಲಬೇಕು ನಿಜ, ಆದರೆ ಯಾವುದೇ ಒಂದು ಹೆಣ್ಣು ಆಗಲಿ ಗಂಡು ಆಗಲಿ ಇನ್ನೊಬ್ಬರ ಸಹಕಾರ, ಪ್ರೋತ್ಸಹದಿಂದಲೇ ಸಾಧನೆ ಮಾಡಬೇಕು. ಇದರಲ್ಲಿ ಗಂಡು ಹೆಣ್ಣು ಯಾರು ಮೇಲು ಅಲ್ಲ ಇಬ್ಬರು ಸಮಾನರೇ ಆದರೆ ಹೆಣ್ಣಿಗೆ ವಿಶೇಷ ಸ್ಥಾನ ಮಾನಾ ಇದೆ ಎಂದು ಹೇಳಿದರು.
ಸಾಹಿತಿ ಬಾಲಶೇಖರ ಬಂದಿ, ಜಾನಪದ ಸಾಹಿತಿ ಶಬ್ಬೀರ ಡಾಂಗೆ ಮಾತನಾಡಿ, ಗಂಡು-ಹೆಣ್ಣು ಎಂಬ ಭೇದ-ಭಾವವನ್ನು ಬುಡುಸಮೇತ ಕಿತ್ತುಹಾಕಿದಾಗ ಮಾತ್ರ ನಮ್ಮ ಸಮಾಜದ ವೃದ್ಧಿ ಮತ್ತಷ್ಟು ಉತ್ತುಂಗಕ್ಕೆರಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಚಲನಚಿತ್ರ ನಿರ್ಮಾಪಕ ನಂದೀಶ, ರೈತ ಸಂಘಟೆಯ ಪದಾಧಿಕಾರಿ ದ್ಯಾಮನಗೌಡ ಪಾಟೀಲ, ಶಬ್ಬೀರ ಡಾಂಗೆ, ಓಂ ಸಂತಾ, ಮಲ್ಲು ಬೋಳನವರ, ಸುಭಾಷ ಗೋಡ್ಯಾಗೋಳ, ಅಯೂಬ ಕಲಾರಕೊಪ್ಪ, ಮಂಜುನಾಥ ರೇಳೆಕರ ಹಾಗೂ ಶ್ರೀ ಮಂಜುನಾಥ ಸೈನಿಕರ ತರಬೇತಿ ಕೇಂದ್ರ ಶಿಬಿರಾಥಿಗಳು ಉಪಸ್ಥಿತರಿದ್ದರು.
