ಮೂಡಲಗಿ: ಭಗವಂತನ ಸೃಷ್ಠಿಯಲ್ಲಿ ವಿಕಲಚೇತನರಿಗೂ ಒಂದು ವಿಶಿಷ್ಠ ಶಕ್ತಿ ಇದ್ದೂ ಅವರು ಕೂಡಾ ಸ್ವಾವಲಂಬಿ ಜೀವನ ನಡೆಸುವಂತಾಗಲು ಸರ್ಕಾರ ಹಲವಾರು ಯೊಜನೆಗಳನ್ನು ಜಾರಿಗೆ ತಂದಿದೆ. ಯಾರು ವಿಕಲಚೇತನರಲ್ಲವೋ ಅಂತವರು ವಿಕಲಚೇತನರಿಗೆ ಆ ಯೋಜನೆಗಳ ಸದುಪಯೋಗವಾಗುವಂತೆ ಸಹಾಯ ಮಾಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಮಾ-20 ರಂದು ಕಲ್ಲೋಳಿ ಪಟ್ಟಣದ ಸಂಸದರ ಜನಸಂಪರ್ಕ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನ ಫಲಾನುಭವಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಹಸ್ತಾಂತರ ಮಾಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ವಿಕಲಚೇತನರು ಮುಖ್ಯವಾಹಿನಿಗೆ ಬರಲು ಸರ್ಕಾರ ವಿವಿಧ ಯೋಜನೆ ರೂಪಿಸಿ ಪ್ರತ್ಯೇಕ ಅನುದಾನ ಮೀಸಲಿಡುತ್ತಿದೆ. ವಿಕಲಚೇತನರು ನ್ಯೂನತೆಯ ಬಗ್ಗೆ ಮಾನಸಿಕವಾಗಿ ಕುಗ್ಗದೇ ಆತ್ಮಸ್ಥೈರ್ಯ ಬೆಳೆಸಿಕೊಂಡು ಎಲ್ಲ ಸವಾಲುಗಳನ್ನು ಗೆದ್ದು ನಿಲ್ಲುವಂತೆ ಬದುಕಬೇಕಾಗಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ನಾಮದೇವ ಬಿಲಕಾರ, ಪ್ರಮುಖರಾದ ಬಸವರಾಜ ಕಡಾಡಿ, ಮಹಾದೇವ ಮದಭಾಂವಿ, ಹಣಮಂತ ಕಲಕುಟ್ರಿ ಸೇರಿದಂತೆ ವಿಕಲಚೇತನ ಇಲಾಖೆಯ ಸಿಬ್ಬಂದಿ ಹಾಜರಿದ್ದರು.