ಮೂಡಲಗಿ: ‘ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದು ಡಾ. ತಿಮ್ಮಣ್ಣ ಗಿರಡ್ಡಿ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಪುರಸಭೆಯ ಸಹಯೋಗದಲ್ಲಿ ಗುರುವಾರ ಆಚರಿಸಿದ ವಿಶ್ವ ಆರೋಗ್ಯ ದಿನಾಚರಣೆ ಸಮಾರಂಭ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ರೋಗವು ದೇಹದಲ್ಲಿ ವ್ಯಾಪಿಸದಂತೆ ಎಚ್ಚರವಹಿಸುವುದು ಮತ್ತು ಮುಂಜಾಗೃತೆ ತೆಗೆದುಕೊಳ್ಳುವುದು ಅವಶ್ಯವಿದೆ ಎಂದರು.
ಹೃದಯ, ಕಿಡ್ನಿ, ಶ್ವಾಸಕೋಶ, ಕಣ್ಣು ಹೀಗೆ ದೇಹದ ಎಲ್ಲ ಅವಯವಗಳು ಮನುಷ್ಯನಿಗೆ ದೊಡ್ಡ ಆಸ್ತಿ ಇದ್ದಂತೆ. ಕಿಡ್ನಿ ಹಾಳಾದಾಗ ಮಾತ್ರ ಕಿಡ್ನಿಯ ಮಹತ್ವ ಗೊತ್ತಾಗುತ್ತದೆ. ಮನುಷ್ಯ ಆರೋಗ್ಯದಿಂದ ಇರುವುದಕ್ಕಾಗಿ ಉತ್ತಮ ಪರಿಸರ, ಸ್ವಚ್ಛತೆ, ಉತ್ತಮ ಆಹಾರ, ಉತ್ತಮ ಚಿಂತನೆ, ಯೋಗ, ವ್ಯಾಯಾಮದಂತ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಡಾ. ಗಿರಡ್ಡಿ ಹೇಳಿದರು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ ‘ದೇಹದ ಆರೋಗ್ಯದ ಜೊತೆಗೆ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವು ಮುಖ್ಯವಾಗಿದೆ. ಇನ್ನೊಬ್ಬರಿಗೆ ನೋವು ಆಗದಂತೆ ನಮ್ಮ ಮನಸ್ಸನ್ನು ಶುದ್ಧವಾಗಿರಿಸಕೊಳ್ಳಬೇಕು. ದ್ವೇಷ, ವಿರಸ, ಸಿಟ್ಟು ಅಪ್ರಾಣಿಕತೆ ಇವು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ ಎಂದರು.
ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯನ್ನು ತಪಾಸಣೆ ಮಾಡಿಕೊಳ್ಳುವ ಮೂಲಕ ಶಿಬಿರವನ್ನು ಉದ್ಘಾಟಿಸದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ‘ಲಯನ್ಸ್ ಕ್ಲಬ್‍ದ ವೈದ್ಯರ ನಡೆ ಜನರ ಕಡೆಗೆ’ ಅಭಿಯಾನ ಮಾಡಿದ್ದು, ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ಧೇಶವಾಗಿದೆ. ಪುರಸಭೆ ಸೇರಿದಂತೆ ಬಿಇಒ ಕಚೇರಿ, ತಹಶೀಲ್ದಾರ್ ಕಚೇರಿ, ಹೆಸ್ಕಾಂ ಕಚೇರಿಗಳ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು.
ಪುರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಇತರೆ ಆರೋಗ್ಯ ತಪಾಸಣೆಯನ್ನು ಮಾಡಿದರು.
ಪುರಸಭೆ ಮ್ಯಾನೇಜರ ಎಂ.ಎಸ್. ಬಿರಾದಾರ ಪಾಟೀಲ, ಸಮುದಾಯ ಯೋಜನಾಧಿಕಾರಿ ಸಿ.ಬಿ. ಪಾಟೀಲ, ಎಸ್.ಬಿ. ಚಿಕ್ಕೋಣ, ಡಾ.ಎಸ್.ಎಸ್. ಪಾಟೀಲ, ಸಂಜಯ ಮೋಕಾಸಿ, ಎನ್.ಟಿ. ಪಿರೋಜಿ, ಶ್ರೀಶೈಲ್ ಲೋಕನ್ನವರ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ ಇದ್ದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ನಿರೂಪಿಸಿದರು, ಖಜಾಂಚಿ ಸುಪ್ರೀತ ಸೋನವಾಲಕರ ವಂದಿಸಿದರು.