ರೈತರಿಗೆ ರಸಗೊಬ್ಬರ ದರ ಏರಿಕೆಯ ಭಾರ ತಡೆಯಲು 60,939,23 ಕೋಟಿ ಸಬ್ಸಿಡಿ ಘೋಷಸಿದ ಕೇಂದ್ರ ಸರ್ಕಾರ -ಸಂಸದ ಈರಣ್ಣ ಕಡಾಡಿ
ಮೂಡಲಗಿ: ರಷ್ಯಾ ಮತ್ತು ಉಕ್ರೇನ್ ಯುದ್ದದ ಕಾರಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಕೊರತೆಯುಂಟಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಮನಗಂಡು ಪ್ರಸಕ್ತ ವರ್ಷದ ಖಾರಿಫ್ ಋತುವಿಗೆ ಸಬ್ಸಿಡಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆ ನಿರ್ಧರಿಸಿದೆ. ಇದರಿಂದ ರಸಗೊಬ್ಬರದ ಬೆಲೆ ಏರಿಕೆಯ ಭಾರವನ್ನು ತಡೆಯಲು ಸಾಧ್ಯವಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಗುರುವಾರ ಏ-28 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು (ಏಪ್ರೀಲ್ 1 ರಿಂದ ಸಪ್ಟಂಬರ್ 30 ರವರೆಗೆ) ತಿಂಗಳುಗಳಿಗೆ ಡಿಎಪಿ ಸೇರಿದಂತೆ ಫಾಸ್ಟೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ 60,939,23 ಕೋಟಿ ರೂ. ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೊದನೆ ನೀಡಿದೆ. ಕಳೆದ ಹಣಕಾಸು ವರ್ಷದಲ್ಲಿ 57,150 ಕೋಟಿ ರೂ.ಗಳ ಸಬ್ಸಿಡಿ ನೀಡಲಾಗಿತ್ತು. ಡಿಎಪಿ ಮೇಲಿನ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ 2501 ರೂ.ಗೆ ಹೆಚ್ಚಿಸಲಾಗಿದ್ದು, 1350 ರೂ ರೈತರು 1 ಚೀಲ ಡಿಎಪಿ ಪಡೆಯಬಹುದು. ಕಳೆದ ವರ್ಷ ಡಿಎಪಿಗೆ 512 ರೂ ಸಬ್ಸಿಡಿ ನೀಡಲಾಗಿತ್ತು, ರೈತರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ಕೈಗೆಟಕುವ ದರದಲ್ಲಿ ರಸಗೊಬ್ಬರ ಒದಗಿಸುವುದಕ್ಕೆ ಇದು ನೆರವಾಗಲಿದೆ.
ರೈತರ ಸಂಕಷ್ಟ ಸಮಯದಲ್ಲಿ ಇಂತಹ ದಿಟ್ಟ ಕ್ರಮಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.