ಮೂಡಲಗಿ: ಭತ್ತ-ರಾಗಿ ಸೇರಿದಂತೆ ದೇಶದ ಪ್ರಮುಖ 17 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಿ, ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಮಿತಿ ಸಭೆಯು ಅನ್ನದಾತರ ಆದಾಯ ವೃದ್ಧಿಗೆ ಕ್ರಮಕೈಗೊಂಡಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಶುಕ್ರವಾರ ಜೂನ್ 9 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಸಾಮಾನ್ಯವಾಗಿ ಬೆಳ ಮಾರುಕಟ್ಟೆಗೆ ಬಂದಾಗ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಬೆಂಬಲ ಬೆಲೆಯ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬಿತ್ತನೆ ಸಮಯದಲ್ಲೇ ಬೆಂಬಲ ಬೆಲೆಯನ್ನು ನಿಗದಿ ಮಾಡಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ ಎಂದರು.
ಭತ್ತದ ಬೆಂಬಲ ಬೆಲೆ ಕ್ವಿಂಟಾಲಗೆ 100 ಹೆಚ್ಚಿಸಿದ್ದು, ರೂ. 2040 ಆಗಲಿದೆ. ಜೋಳ, ಮೆಕ್ಕೆ ಜೋಳ, ರಾಗಿ, ಹೆಸರು, ತೊಗರಿ, ಶೇಂಗಾ, ಹತ್ತಿ ಬೆಲೆಯನ್ನು ಹೆಚ್ಚಳ ಮಾಡಿ ಕೃಷಿ ಕಾರ್ಯದಲ್ಲಿ ತೊಡಗುವ ರೈತರ ಉತ್ಸಾಹವನ್ನು ಹೆಚ್ಚಿಸಲಿದೆ. ಅನ್ನದಾತರ ಅಭಿವೃದ್ಧಿಗೆ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ಮಾನ್ಯ ಪ್ರಧಾನ ಮಂತ್ರಿಯವರಿಗೆ, ಮಾನ್ಯ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರುಗಳಿಗೆ ಸಂಸದ ಈರಣ್ಣ ಕಡಾಡಿ ಅಭಿನಂದನೆ ತಿಳಿಸಿದ್ದಾರೆ.