ಮೂಡಲಗಿ : ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಸಬ್ ರಜಿಸ್ಟ್ರಾರ್ ಕಛೇರಿಯು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಮೂಡಲಗಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಹೇಳಿದರು.
ಮಂಗಳವಾರದಂದು ಸಬ್ ರಜಿಸ್ಟ್ರಾರ್ ಕಛೇರಿಗೆ ಮೂಡಲಗಿ ತಹಶೀಲ್ದಾರ ಡಿ.ಜಿ. ಮಹಾತ್ ಮತ್ತು ಮೂಡಲಗಿ ಸಬ್ ರಜಿಸ್ಟ್ರಾರ್ ಹರಿಯಪ್ಪ ನಾಯಿಕ ಅವರೊಂದಿಗೆ ಭೇಟಿ ನೀಡಿದ ಅವರು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಬ್ ರಜಿಸ್ಟ್ರಾರ್ ಕಛೇರಿಗೆ 3 ಕೊಠಡಿಗಳನ್ನು ನೀಡಿದ್ದು, ಫರ್ನಿಚರ್ ಕೆಲಸವೂ ಕೂಡ ಪೂರ್ಣಗೊಂಡಿದೆ. ಹೀಗಾಗಿ ಕಛೇರಿಯನ್ನು ಆರಂಭಿಸಲು ಯಾವುದೇ ಅಡೆತಡೆಗಳಿಲ್ಲ. ಯಾವುದೇ ಹೊಸ ತಾಲ್ಲೂಕುಗಳಲ್ಲಿ ಇದುವರೆಗೂ ಸಬ್ ರಜಿಸ್ಟ್ರಾರ್ ಕಛೇರಿ ಕಾರ್ಯಾರಂಭ ಆಗಿಲ್ಲ. ಆದರೆ ಶಾಸಕರ ಪ್ರಯತ್ನದಿಂದ ಮೂಡಲಗಿಗೆ ಸಬ್ ರಜಿಸ್ಟ್ರಾರ್ ಕಛೇರಿ ಕಾರ್ಯಾರಂಭ ಮಾಡುವ ಸನ್ನಿಹಿತವಾಗಿದೆ. ಜೊತೆಗೆ ಸಬ್ ರಜಿಸ್ಟ್ರಾರ್ ಕೂಡ ಹುದ್ದೆಗೆ ನಿಯೋಜನೆಗೊಂಡಿದ್ದಾರೆ. ಎ.ಜಿ (ಅಕೌಂಟಂಟ್ ಜನರಲ್) ಕಛೇರಿಯಿಂದ ಹೊಸ ಕಛೇರಿ ಆರಂಭಿಸಲು ಡಿಡಿಯು ಕೋಡ್ ಸಿಕ್ಕ ಕೂಡಲೇ ಪೂರ್ಣ ಪ್ರಮಾಣದಲ್ಲಿ ಮೂಡಲಗಿಯಲ್ಲಿ ಸಬ್ ರಜಿಸ್ಟ್ರಾರ್ ಕಛೇರಿ ಸಾರ್ವಜನಿಕರಿಗೆ ಸಿಗಲಿದೆ ಎಂದು ತಿಳಿಸಿದರು.