ಮೂಡಲಗಿ: ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬದ್ದತೆಯ ಪ್ರತಿಬಿಂಬವಾಗಿ ‘ಒಂದು ದೇಶ ಒಂದು ಗೊಬ್ಬರ’ ಯೋಜನೆಯಡಿ ಭಾರತವು ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮುನ್ನಗ್ಗಲಿದೆ. ರೈತರಿಗೆ ಅಗ್ಗದ ಮತ್ತು ಗುಣಮಟ್ಟದ ಪೋಷಕಾಂಶಗಳ ಯೂರಿಯಾ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿ ರೈತರ ಆದಾಯ ದ್ವಿಗುಣಗೊಳಿಸಲು ಸಹಾಯಕಾರಿಯಾಗಲಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘೀಸಿದ್ದಾರೆ.
ಸೋಮವಾರ ಅ.17 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳ ಮುಖಾಂತರ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ರಸಗೊಬ್ಬರ, ಬೀಜ, ಔಷಧಿ ಮತ್ತು ಕೃಷಿ ಉಪಕರಣಗಳು ಸೇರಿದಂತೆ ಕೃಷಿ ಚಟುವಟಿಕೆÉಗಳಿಗೆ ಬೇಕಾದ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿ ಒದಗಿಸಲು ಈ ರೀತಿ ದೇಶಾಧ್ಯಂತ 600 ಮಾರಾಟ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಭಾಗವಾಗಿ ದೇಶದ 11 ಕೋಟಿಗೂ ಅಧಿಕ ರೈತರಿಗೆ ಒಟ್ಟು 16,000 ಕೋಟಿ ರೂ. ಸೇರಿದಂತೆ ರಾಜ್ಯದ 50.36 ಲಕ್ಷ ರೈತರ ಖಾತೆಗೆ 1007.26 ಕೋಟಿ ರೂ. ಮತ್ತು ಬೆಳಗಾವಿ ಜಿಲ್ಲೆಯ 5.38 ಲಕ್ಷ ರೈತರ ಬ್ಯಾಂಕ ಖಾತೆಗಳಿಗೆ 107.6 ಕೋಟಿ ರೂಪಾಯಿ ನೇರವಾಗಿ ಫಲಾನುಭವಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದರಲ್ಲದೇ ದೇಶದ ಬೆನ್ನೆಲುಬಾಗಿರುವ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸದಾ ಕಾಲ ಇರಲಿದೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
