ಮೂಡಲಗಿ : ಬಡತನ, ದೈಹಿಕ ಅಂಗವೈಕಲ್ಯತೆ, ಸುತ್ತಲಿನ ಪರಿಸರ, ಮಾನಸಿಕ ಸ್ಥಿತಿ ಇವುಗಳನ್ನು ಲೆಕ್ಕಿಸದೆ ನಿರಂತರ ಪ್ರಯತ್ನ, ನಿರ್ದಿಷ್ಟ ಗುರಿಯನ್ನು ಹೊಂದಿ, ಛಲ ಬಿಡದೆ ನಿಯಮಿತವಾಗಿ ಅಭ್ಯಾಸ ಮಾಡಿದ್ದೆ ಆದರೆ ಜೀವನದಲ್ಲಿ ಎಂತಹ ದೊಡ್ಡ ಸಾಧನೆಯನ್ನಾದರೂ ಮಾಡಬಹುದು ಹಾಗೂ ನೀವು ಕೂಡ ನನ್ನ ಹಾಗೆ ಜಿಲ್ಲಾಧಿಕಾರಿಯಾಗ ಬಹುದು ಎಂದು ಬೆಂಗಲೂರ ನಗರದ ಆದಾಯ ತೆರಿಗೆ ಇಲಾಖೆಯ ಜಿಲ್ಲಾಧಿಕಾರಿ ಲಕ್ಕಪ್ಪ ಹಣಮಣ್ಣವರ್ ಅವರು ಅಭಿಪ್ರಾಯ ಪಟ್ಟರು.
ಅವರು ಶನಿವಾರ ಸಂಜೆ ತಾಲೂಕಿನ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವ ಸಮಾರಂಭದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿ, ನಾನು ಎμÉ್ಟೀ ದೊಡ್ಡ ಹುದ್ದೆಯಲ್ಲಿದ್ದರೂ ತಂದೆ ತಾಯಿಯಂದಿರು ನನಗೆ ನೀಡಿದ ಬೆಂಬಲವನ್ನು ನಾನು ಎಂದಿಗೂ ಮರೆಯುವುದಿಲ್ಲ ನೀವು ಕೂಡ ನಿಮ್ಮ ತಂದೆ ತಾಯಿಯ ಬೆಂಬಲವನ್ನ ಪಡೆದುಕೊಳ್ಳಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ನೀವು ಅದೃಷ್ಟವಂತರು ನಾವು ಶಾಲೆ ಕಲಿಯುವ ಸಂದರ್ಭದಲ್ಲಿ ನಮಗೆ ಆಂಗ್ಲ ಮಾಧ್ಯಮ ಶಿಕ್ಷಣ ದೊರಕಿಲ್ಲ ಆದರೆ ಪುಣ್ಯವಂತರಾದ ನಿಮಗೆ ಇವತ್ತು ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರೆಯುತ್ತಿದೆ ಇದರ ಸದುಪಯೋಗ ಪಡೆದುಕೊಂಡು ಒಳ್ಳೆ ಒಳ್ಳೆ ಪುಸ್ತಕಗಳನ್ನ ಓದಿಕೊಂಡು ಜಗತ್ತಿನ ವಿವಿಧ ವಿಷಯಗಳ ಕುರಿತು ಜ್ಞಾನವನ್ನ ಪಡೆದುಕೊಂಡು ಜೀವನದಲ್ಲಿ ನೀವು ಕೂಡ ಉನ್ನತ ಹುದ್ದೆಗೆ ಏರಲಿ ಎಂದರು.
ಘಟಪ್ರಭಾ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ಕ್ರಾಂತಿಯನ್ನೇ ಮಾಡುತ್ತಿರುವ ಜ್ಞಾನಗಂಗೋತ್ರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಸನಾತನ ಧರ್ಮವನ್ನು, ಒಳ್ಳೆಯ ಸಂಸ್ಕಾರವನ್ನು, ಒಳ್ಳೆಯ ನೈತಿಕತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಲಿ ಎಂದರು.
ಗೋಕಾಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಶಾಲೆ ಶತಮಾನೋತ್ಸವದ ಕಡೆಗೆ ಯಶಸ್ವಿಯಾಗಿ ಮುನ್ನಡೆಯಲಿ. ಈ ಶಾಲೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರಹೊಮ್ಮಲಿ ಎಂದರು.
ಗೋಕಾಕ ಜ್ಞಾನ ಮಂದಿರದ ಆಧ್ಯಾತ್ಮ ಕೇಂದ್ರ ಧರ್ಮದರ್ಶಿನಿ ಮಾತೋಶ್ರೀ ಸುವರ್ಣತಾಯಿ ಹೊಸಮಠ ಮಾತನಾಡಿ, ಜನನಿ ಹಾಗೂ ಜನ್ಮಭೂಮಿಗೆ, ಹೆತ್ತ ತಂದೆ-ತಾಯಂದಿರಿಗೆ ಗೌರವ ಕೊಡುವ ಪ್ರತಿಯೊಂದು ಮಗುವು ದೇಶದ ಆಸ್ತಿ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ.
ಚಿಂತಕ ಹಾಗೂ ಪ್ರಾಧ್ಯಾಪಕ ವೀರೇಶ್ ಪಾಟೀಲ್ ಮಾತನಾಡಿ, ಶಿಕ್ಷಣ ಎಂದರೆ ಓದು-ಬರಹ-ಲೆಕ್ಕ, ಹಣ ಸಂಪಾದನೆ, ಆಸ್ತಿ ಸಂಪಾದನೆ, ಕೀರ್ತಿಗಳಿಸುವುದು ಅಲ್ಲ.! ಹೃದಯವಂತಿಕೆಯನ್ನ ಬೆಳೆಸಿಕೊಂಡು, ಪ್ರಪಂಚಕ್ಕೆ ಹೊಂದಿಕೊಂಡು, ಕಾಲಕ್ಕೆ ಸರಿಯಾಗಿ ಒಳ್ಳೆಯ ಚಿಂತನೆಗಳನ್ನು ಮಾಡುತ್ತ ಜೀವನ ಸಾಗಿಸಿದರೆ ಮಾತ್ರ ಅದು ಒಳ್ಳೆಯ ಶಿಕ್ಷಣ ಎಣಿಸಿಕೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮದ ಗುರು-ಹಿರಿಯರು, ಪಾಲಕ-ಪೋಷಕರು, ಅಧಿಕಾರಿ ವೃಂದದವರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಜನರ ನಡುವೆ ದಶಮಾನೋತ್ಸವ ಸಮಾರಂಭ ನಡೆಯಿತು.
ವಿದ್ಯಾರ್ಥಿನಿಯರಾದ ವಿದ್ಯಾಶ್ರೀ ಹೊಸೂರ ಹಾಗೂ ಐಶ್ವರ್ಯ ಕೊಡ್ಲಿ ಕಾರ್ಯಕ್ರಮವನ್ನು ನಿರೂಪಿಸಿದರು.