ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲ ಸಮರ್ಥರಾಗಬೇಕು
ಮೂಡಲಗಿ: ‘ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪರಿಶ್ರಮದಿಂದ ಓದಿ ಪ್ರಯತ್ನಪಟ್ಟರೆ ಯಶಸ್ಸು ಬೆನ್ನುಹಿಂದೆ ಬರುತ್ತದೆ. ವಿದ್ಯಾರ್ಥಿಗಳು ಓದಿಗೆ ಮಹತ್ವ ನೀಡಬೇಕು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಲಕ್ಷ್ಮೀನಗರದಲ್ಲಿ ಯುಗಾದಿ ದಿನದಂದು ಶ್ರೀಮತಿ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಟ್ರಸ್ಟ್‍ದಿಂದ ಪ್ರಾರಂಭಿಸಿರುವ ಜ್ಞಾನ ಸಾಧನಾ ಸ್ವ-ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನ ಸಾಧನಾ ಕೇಂದ್ರದಲ್ಲಿ ಅಧ್ಯಯನಕ್ಕೆ ಉಚಿತ ಸೌಲಭ್ಯ ಕಲ್ಪಿಸಿಕೊಟ್ಟಿದ್ದು ಮೂಡಲಗಿ ಭಾಗದ ವಿದ್ಯಾರ್ಥಿಗಳು ಸದುಪಯೋಗಪಡೆದುಕೊಳ್ಳಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳು ಇದ್ದು ಕೆಎಎಸ್, ಐಎಎಸ್, ಐಪಿಎಸ್, ಸಿಎ, ಪಿಎಸ್‍ಐ, ಪಿಡಿಒದಂತ ಹಲವಾರು ಸ್ಪರ್ಧಾತ್ಮ ಪರೀಕ್ಷೆಗಳನ್ನು ಎದುರಿಸಲು ಸಮರ್ಥರಾಗಬೇಕು. ಅರಭಾವಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎನ್ನುವುದು ನನ್ನ ಬಯಕೆಯಾಗಿದೆ. ಅದನ್ನು ವಿದ್ಯಾರ್ಥಿಗಳು ಮಾಡಿ ತೋರಿಸಬೇಕು ಎಂದರು.
ಡಾ. ವಸಂತ ನಾಯಿಕವಾಡಿ ಮಾತನಾಡಿ ಧಾರವಾಡ, ಬೆಂಗಳೂರದಲ್ಲಿ ಇರುವಂತ ಸೌಲಭ್ಯವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸ್ವ-ಅಧ್ಯಯನ ಕೇಂದ್ರವನ್ನು ಮೂಡಲಗಿಯಲ್ಲಿ ಪ್ರಾರಂಭಿಸಿದ್ದಾರೆ. ಸದ್ಯ 70 ವಿದ್ಯಾರ್ಥಿಗಳಿಗೆ ಅವಕಾಶವಿದೆ. ದಿನಪತ್ರಿಕೆಗಳು, ಇಂಟರ್‍ನೆಟ್ ಸೌಲಭ್ಯವನ್ನು ಕೇಂದ್ರದಲ್ಲಿ ಉಚಿತವಾಗಿ ನೀಡಲಾಗಿದೆ ಎಂದರು.
ಯುವ ಧುರೀಣ ಸವೋತ್ತಮ ಜಾರಕಿಹೊಳಿ, ಡಾ. ಗಿರೀಶ ಸೋನವಾಲ್ಕರ್, ಬಿಇಒ ಅಜಿತ ಮನ್ನಿಕೇರಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಆರ್.ಪಿ. ಸೋನವಾಲಕರ, ಸಂತೋಷ ಸೋನವಾಲಕರ ಇದ್ದರು.