ಮೂಡಲಗಿ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಬುಧವಾರ 2023-24ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವದಲ್ಲಿ ಅಕ್ಷರಗಳಿಂದ ಅಲಂಕೃತವಾದ ವಾಹನಕ್ಕೆ ಬಿಇಒ ಅಜಿತ್ ಮನ್ನಿಕೇರಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಚಾಲನೆ ನೀಡಿದರು.
ಮಕ್ಕಳ ಪ್ರತಿಭೆ ಅರಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ
ಮೂಡಲಗಿ: ‘ಮಕ್ಕಳ ಪ್ರತಿಭೆಯನ್ನು ಅರಳಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಅಧಿಕಾವಾಗಿದೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಮೂಡಲಗಿ ಶೈಕ್ಷಣಿಕ ವಲಯಕ್ಕೆ ಶಿಕ್ಷಕರು ಉತ್ತಮ ಹೆಸರು ತರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಹೇಳಿದರು.
ಇಲ್ಲಿಯ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವದಲ್ಲಿ ಅಕ್ಷರ ಬಂಡಿಗೆ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಅತಿಥಿ ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಾಥಮಿಕ ಶಾಲಾ ಹಂತವು ಅತ್ಯಂತ ಪ್ರಮುಖವಾಗಿದ್ದು, ಶಿಕ್ಷಣದ ಅಡಿಪಾಯವಿದ್ದಂತೆ. ಇಂದಿನ ಮಕ್ಕಳು ನಾಳಿನ ಭವ್ಯ ಭಾರತದ ಶ್ರೇಷ್ಠ ನಾಗರಿಕರಾಗುವರು. ಮಕ್ಕಳನ್ನು ನಿರ್ಲಕ್ಷಿಸದೆ ಅವರ ಬೆಳವಣಿಗೆಗೆ ಶಾಲಾ ಸಂಕುಲವು ಸದಾ ಜಾಗೃತವಾಗಿ ಕಾರ್ಯಮಾಡುವುದು ಅವಶ್ಯವಿದೆ ಎಂದರು.
ಮೂಡಲಗಿ ಶೈಕ್ಷಣಿಕ ವಲಯ ಶೈಕ್ಷಣಿಕ ಬೆಳವಣಿಗೆಯಲ್ಲಿ ರಾಷ್ಟ್ರ ಮಟ್ಟದದಲ್ಲಿ ಗುರುತಿಸಿಕೊಂಡಿದ್ದು, ಇದು ಹೀಗಿಯೇ ಮುಂದುವರಿಯಲಿ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸಿಡಿಪಿಒ ಯಲ್ಲಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಶಿಕ್ಷಕ ಅಡ್ವಿನ್ ಪರಸನ್ನವರ ಪ್ರಾಸ್ತಾವಿಕ ಮಾತನಾಡಿದರು.
ಪ್ರಾರಂಭದಲ್ಲಿ ಶಾಲಾ ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ಪುಷ್ಟವೃಷ್ಟಿ ಮಾಡಿ ಶಾಲೆಗೆ ಬರಮಾಡಿಕೊಂಡರು. ಅಕ್ಷರ ಮತ್ತು ಅಂಕಿ, ಸಂಖ್ಯೆಗಳಿಂದ ಅಲಂಕೃತಗೊಂಡ ವಾಹನಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಬಿಆರ್‍ಸಿ ರೇಣುಕಾ ಆನಿ, ಪುರಸಭೆ ಸದಸ್ಯ ಖುರ್ಶಾದ ನದಾಫ, ಸಿಆರ್‍ಪಿ ಸಮೀರ ನದಾಫ, ಮುಖ್ಯ ಶಿಕ್ಷಕ ಬಿ.ಎಚ್. ಹುಲ್ಯಾಳ ಮತ್ತು ಶಾಲಾ ಶಿಕ್ಷಕಿಯರು ಇದ್ದರು.